ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟದಲ್ಲಿ (ಕೆಎಂಎಫ್) ಯಾವುದೇ ಪರೀಕ್ಷೆ ಅಥವಾ ಸಂದರ್ಶನ ಇಲ್ಲದೆಯೇ ನೇರವಾಗಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಉದ್ಯೋಗಾಕಾಂಕ್ಷಿಗಳಿಂದ ಬರೋಬ್ಬರಿ 50 ಲಕ್ಷ ರೂಪಾಯಿ ವಸೂಲಿ ಮಾಡಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ತಮ್ಮನ್ನು ತಾವು ಕೆಎಎಸ್ ಅಧಿಕಾರಿ ಮತ್ತು ಕೆಎಂಎಫ್ ನಿರ್ದೇಶಕರೆಂದು ಪರಿಚಯಿಸಿಕೊಂಡಿದ್ದ ಇಬ್ಬರು ವಂಚಕರ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಆರ್.ಟಿ.ನಗರದ ನಿವಾಸಿ ಕರಿಗೌಡ ಎಸ್.ಪಾಟೀಲ್ ಎಂಬುವರು ನೀಡಿದ ದೂರಿನ ಮೇರೆಗೆ ಎನ್. ಕೃಷ್ಣನ್ (ನಕಲಿ ಕೆಎಎಸ್ ಅಧಿಕಾರಿ) ಮತ್ತು ನಾಗರಾಜ್ (ನಕಲಿ ಕೆಎಂಎಫ್ ನಿರ್ದೇಶಕ) ಎಂಬುವವರ ವಿರುದ್ಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. 2022ರಲ್ಲಿ ಮಲ್ಲೇಶ್ವರದ ಖಾಸಗಿ ಹೋಟೆಲ್ ಒಂದರಲ್ಲಿ ಈ ಆರೋಪಿಗಳು ದೂರುದಾರರಿಗೆ ಪರಿಚಯವಾಗಿದ್ದರು. ನಕಲಿ ಗುರುತಿನ ಚೀಟಿ ಪ್ರದರ್ಶಿಸಿ, “ಕೆಎಂಎಫ್‌ನಲ್ಲಿ 25 ಹುದ್ದೆಗಳು ಖಾಲಿ ಇವೆ, ನಮಗೆ ನೇಮಕಾತಿ ಅಧಿಕಾರವಿದ್ದು, ತಲಾ 10 ಲಕ್ಷ ಕೊಟ್ಟರೆ 3 ತಿಂಗಳಲ್ಲಿ ಅಪಾಯಿಂಟ್ಮೆಂಟ್ ಆರ್ಡರ್ ಕೊಡಿಸುತ್ತೇವೆ,” ಎಂದು ನಂಬಿಸಿದ್ದರು.
ದೂರುದಾರರ ಸಂಬಂಧಿಕರಾದ ವಿಜಯೇಂದ್ರ, ಮಧು, ಅನಿತಾ ಸೇರಿದಂತೆ ಸುಮಾರು 10 ಜನ ಆಕಾಂಕ್ಷಿಗಳು ಈ ಮಾತು ನಂಬಿ, 2022-23ರ ಅವಧಿಯಲ್ಲಿ 36 ಲಕ್ಷ ರೂ.ಗಳನ್ನು ಬ್ಯಾಂಕ್ ಮೂಲಕ ಹಾಗೂ 14 ಲಕ್ಷ ರೂ.ಗಳನ್ನು ನಗದಾಗಿ ನೀಡಿದ್ದರು. ಆದರೆ ದಿನ ಕಳೆದರೂ ಕೆಲಸ ಸಿಗಲಿಲ್ಲ. ಹಣ ವಾಪಸ್ ಕೇಳಿದಾಗ, “ಈಗ ಸರ್ಕಾರ ಬದಲಾಗಿದೆ, ಇನ್ನೂ ಹಣ ಕೊಡಬೇಕು, ಇಲ್ಲದಿದ್ದರೆ ಕೊಟ್ಟ ಹಣವೂ ಬರುವುದಿಲ್ಲ” ಎಂದು ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಸದ್ಯ ಮಲ್ಲೇಶ್ವರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.






