ಚೆನ್ನೈ: ಕಾಲಿವುಡ್ ನಟ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಹಾಗೂ ರಾಜಕೀಯ ಪ್ರವೇಶಕ್ಕೂ ಮುನ್ನ ನಟಿಸುತ್ತಿರುವ ಕೊನೆಯ ಚಿತ್ರ ‘ಜನ ನಾಯಗನ್’ (Jana Nayagan) ಬಿಡುಗಡೆಗೆ ಎದುರಾಗಿದ್ದ ವಿಘ್ನ ನಿವಾರಣೆಯಾಗಿದೆ. ಸೆನ್ಸಾರ್ ಪ್ರಮಾಣಪತ್ರ ನೀಡುವಲ್ಲಿ ಉಂಟಾಗಿದ್ದ ವಿವಾದಕ್ಕೆ ತೆರೆ ಎಳೆದಿರುವ ಮದ್ರಾಸ್ ಹೈಕೋರ್ಟ್, ಚಿತ್ರಕ್ಕೆ ‘ಯು/ಎ’ (U/A) ಪ್ರಮಾಣಪತ್ರ ನೀಡುವಂತೆ ಸೆನ್ಸಾರ್ ಮಂಡಳಿಗೆ ಖಡಕ್ ಆದೇಶ ನೀಡಿದೆ.
ದಳಪತಿ ವಿಜಯ್ ಅವರು ಪೂರ್ಣಾವಧಿ ರಾಜಕೀಯಕ್ಕೆ ಧುಮುಕುವ ಮುನ್ನ ನಟಿಸುತ್ತಿರುವ ಕೊನೆಯ ಚಿತ್ರ ಇದಾಗಿರುವುದರಿಂದ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ. ಈ ಚಿತ್ರವು ಮೂಲತಃ ಇಂದು (ಜನವರಿ 9) ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ವಿಳಂಬದ ಕಾರಣದಿಂದ ಚಿತ್ರದ ಬಿಡುಗಡೆಯನ್ನು ನಿರ್ಮಾಪಕರು ಅನಿವಾರ್ಯವಾಗಿ ಮುಂದೂಡಿದ್ದಾರೆ. ಬುಧವಾರ ನಡೆದ ವಿಚಾರಣೆಯ ನಂತರ ಚಿತ್ರತಂಡ ಈ ನಿರ್ಧಾರವನ್ನು ಪ್ರಕಟಿಸಿತ್ತು.
ಚಿತ್ರಕ್ಕೆ ಪ್ರಮಾಣಪತ್ರ ನೀಡಲು ಸತಾಯಿಸುತ್ತಿದ್ದ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ನಡೆಗೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. “ಇಂತಹ ದೂರುಗಳನ್ನು ಎಂಟರ್ಟೈನ್ ಮಾಡುವುದು ಅಪಾಯಕಾರಿ ಪ್ರವೃತ್ತಿ” ಎಂದು ನ್ಯಾಯಾಲಯವು ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಅಗತ್ಯ ಮಾರ್ಪಾಡುಗಳನ್ನು ಮಾಡಿದ ನಂತರ ತಕ್ಷಣವೇ ಪ್ರಮಾಣಪತ್ರ ನೀಡುವಂತೆ ಸೂಚಿಸಿದೆ. ಅಲ್ಲದೆ, ಸಿನಿಮಾವನ್ನು ಮತ್ತೆ ಪರಿಶೀಲನಾ ಸಮಿತಿಗೆ ಕಳುಹಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಏನಿದು ವಿವಾದ? ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರವು ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಒಂದು ತಿಂಗಳು ಕಳೆದರೂ ಸಿಬಿಎಫ್‌ಸಿ (CBFC)ಯಿಂದ ಕ್ಲಿಯರೆನ್ಸ್ ಸಿಕ್ಕಿರಲಿಲ್ಲ. ಡಿಸೆಂಬರ್ 19ರಂದು ಮಂಡಳಿಯು ಚಿತ್ರದಲ್ಲಿ ಅತಿಯಾದ ಹಿಂಸಾಚಾರವಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ, ಹಲವು ದೃಶ್ಯಗಳಿಗೆ ಕತ್ತರಿ ಹಾಕಲು ಮತ್ತು ಕೆಲವು ಸಂಭಾಷಣೆಗಳನ್ನು ಮ್ಯೂಟ್ ಮಾಡಲು ಸೂಚಿಸಿತ್ತು. ನಿರ್ಮಾಪಕರು ಇದಕ್ಕೆ ಒಪ್ಪಿ ಪಾಲಿಸಿದ್ದರು.
ಆದರೆ, ಕೊನೆಯ ಕ್ಷಣದಲ್ಲಿ ಮಂಡಳಿಯ ಸದಸ್ಯರೊಬ್ಬರು ಚಿತ್ರದ ದೃಶ್ಯವೊಂದರಲ್ಲಿ ‘ರಕ್ಷಣಾ ಇಲಾಖೆಯ ಲಾಂಛನ’ (Defense Emblem) ಬಳಸಲಾಗಿದೆ ಎಂದು ತಕರಾರು ತೆಗೆದರು. ಇದಕ್ಕೆ ಅಧಿಕೃತ ಅನುಮತಿ ಮತ್ತು ಸ್ಪಷ್ಟೀಕರಣದ ಅಗತ್ಯವಿದೆ ಎಂದು ವಾದಿಸಿ, ವಿಷಯವನ್ನು ತಜ್ಞರ ಪರಿಶೀಲನೆಗೆ ಕಳುಹಿಸಲು ಮುಂದಾಗಿದ್ದರು. ಇದು ಚಿತ್ರತಂಡವನ್ನು ಹೈಕೋರ್ಟ್ ಮೆಟ್ಟಿಲೇರುವಂತೆ ಮಾಡಿತ್ತು. ಇದೀಗ ನ್ಯಾಯಾಲಯದ ಆದೇಶದೊಂದಿಗೆ ಚಿತ್ರತಂಡ ನಿಟ್ಟುಸಿರು ಬಿಟ್ಟಿದೆ.






