Home State Politics National More
STATE NEWS

2 ಕೋಟಿ ವಿಮೆಗಾಗಿ ಗಂಡನನ್ನೇ ಮುಗಿಸಿದ ಪತ್ನಿ; ಪ್ರಿಯಕರನ ಜೊತೆಗಿನ ‘ಖತರ್ನಾಕ್’ ಸಂಚು ಬಯಲು!

Nizamabad wife kills husband for 2 crore insurance money illicit affair crime news
Posted By: Sagaradventure
Updated on: Jan 9, 2026 | 8:12 AM

ನಿಜಾಮಾಬಾದ್ (ತೆಲಂಗಾಣ): ಹಣದ ದುರಾಸೆ ಮತ್ತು ಅನೈತಿಕ ಸಂಬಂಧ ಎಂತಹ ಘೋರ ಕೃತ್ಯಕ್ಕೆ ಎಡೆಮಾಡಿಕೊಡುತ್ತದೆ ಎನ್ನುವುದಕ್ಕೆ ತೆಲಂಗಾಣದ ನಿಜಾಮಾಬಾದ್‌ನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಬರೋಬ್ಬರಿ 2 ಕೋಟಿ ರೂ. ಮೌಲ್ಯದ ವಿಮಾ ಹಣ ಕೈಸೇರುತ್ತದೆ ಎಂಬ ದುರಾಸೆಯಿಂದ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಬರ್ಬರವಾಗಿ ಹತ್ಯೆಗೈದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಆರೋಪಿ ಪತ್ನಿ ಸೌಮ್ಯಾ, ತನ್ನ ಪತಿ ಪಲ್ನಾಟಿ ರಮೇಶ್ ಅವರನ್ನು ಹತ್ಯೆ ಮಾಡಲು ಪ್ರಿಯಕರ ದಿಲೀಪ್ ಮತ್ತು ಗುತ್ತಿಗೆ ಹಂತಕರೊಂದಿಗೆ ಸಂಚು ರೂಪಿಸಿದ್ದಳು. ಹತ್ಯೆಯ ನಂತರ ಇದನ್ನು ಸಹಜ ಸಾವು ಅಥವಾ ಹೃದಯಾಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದಳು. ಆದರೆ, ಮೃತ ರಮೇಶ್ ಅವರ ಸಹೋದರನ ಸಮಯಪ್ರಜ್ಞೆಯಿಂದ ಪೊಲೀಸರು ಈ ಕೃತ್ಯದ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯ ವಿವರ: ಮಕ್ಲೂರು ಮಂಡಲದ ಬೋರ್ಗಮ್ ನಿವಾಸಿಯಾದ ರಮೇಶ್ ಮತ್ತು ಸೌಮ್ಯಾ 13 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ರಮೇಶ್ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರೆ, ಸೌಮ್ಯಾ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಇದೇ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದಿಲೀಪ್ ಜೊತೆ ಸೌಮ್ಯಾ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದು, ಇದಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಮುಗಿಸಲು ನಿರ್ಧರಿಸಿದ್ದಳು.

ದಿಲೀಪ್ ಮೂಲಕ ಗುತ್ತಿಗೆ ಹಂತಕರನ್ನು ನೇಮಿಸಿಕೊಂಡಿದ್ದ ಸೌಮ್ಯಾ, ತನ್ನ ಚಿನ್ನದ ಉಂಗುರವನ್ನು ಒತ್ತೆಯಿಟ್ಟು ಮುಂಗಡವಾಗಿ 35,000 ರೂ. ನೀಡಿದ್ದಳು. 2025ರ ಆಗಸ್ಟ್‌ನಲ್ಲಿ ರಸ್ತೆ ಅಪಘಾತದ ಮೂಲಕ ರಮೇಶ್ ಅವರನ್ನು ಕೊಲ್ಲುವ ಮೊದಲ ಯತ್ನ ವಿಫಲವಾಗಿತ್ತು. ಇದಾದ ಬಳಿಕ ಡಿಸೆಂಬರ್ 19ರಂದು ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ, ರಮೇಶ್ ಪ್ರಜ್ಞೆ ತಪ್ಪಿದಾಗ ದಿಲೀಪ್ ಮತ್ತು ಆತನ ಸ್ನೇಹಿತ ಅಭಿಷೇಕ್ ಸೇರಿ ಕತ್ತು ಹಿಸುಕಿ ಹಾಗೂ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ನಂಬಿಸಿ ಸೌಮ್ಯಾ ಅಂತ್ಯಕ್ರಿಯೆ ಮುಗಿಸಿದ್ದಳು. ಆದರೆ, ಇಸ್ರೇಲ್‌ನಲ್ಲಿದ್ದ ರಮೇಶ್ ಅವರ ಸಹೋದರ ಕೇತಿರ್ ಅವರಿಗೆ ಸಾವಿನ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು. ಡಿಸೆಂಬರ್ 24ರಂದು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದಾಗ ಕೊಲೆ ನಡೆದಿರುವುದು ದೃಢಪಟ್ಟಿದೆ. ತನಿಖೆ ನಡೆಸಿದಾಗ 2 ಕೋಟಿ ರೂ. ವಿಮಾ ಹಣಕ್ಕಾಗಿ ಈ ಕೃತ್ಯ ನಡೆಸಿರುವುದು ಸೌಮ್ಯಾ ಬಾಯ್ಬಿಟ್ಟಿದ್ದಾಳೆ. ಸದ್ಯ ಪೊಲೀಸರು ಸೌಮ್ಯಾ, ದಿಲೀಪ್ ಸೇರಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮೊಹ್ಸಿನ್ ಎಂಬಾತನಿಗಾಗಿ ಶೋಧ ಮುಂದುವರಿಸಿದ್ದಾರೆ.

Shorts Shorts