ಬೆಂಗಳೂರು: 98ನೇ ಸಾಲಿನ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿರುವ ರಿಷಬ್ ಶೆಟ್ಟಿ (Rishab Shetty) ಅಭಿನಯದ ಬಹುನಿರೀಕ್ಷಿತ ‘ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1’ ಮತ್ತು ಅನುಪಮ್ ಖೇರ್ ಅವರ ‘ತನ್ವಿ ದಿ ಗ್ರೇಟ್’ ಚಿತ್ರಗಳು ಪ್ರತಿಷ್ಠಿತ ಆಸ್ಕರ್‌ನ ‘ಅತ್ಯುತ್ತಮ ಚಿತ್ರ’ (Best Picture) ವಿಭಾಗದ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿಕೊಂಡಿವೆ.
ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ (AMPAS) ಆಸ್ಕರ್ ರೇಸ್‌ಗೆ ಅರ್ಹವಾಗಿರುವ 201 ಚಲನಚಿತ್ರಗಳ ಪಟ್ಟಿಯನ್ನು ಪ್ರಕಟಿಸಿದೆ. ವಿಶೇಷವೆಂದರೆ, ಆಸ್ಕರ್ ಕಣಕ್ಕಿಳಿಯಲು ಅಕಾಡೆಮಿ ನಿಗದಿಪಡಿಸಿದ್ದ ಎಲ್ಲಾ ಕಠಿಣ ಮಾನದಂಡಗಳನ್ನು ಪೂರೈಸುವ ಮೂಲಕ ‘ಕಾಂತಾರ ಚಾಪ್ಟರ್ 1’ ಹಾಗೂ ‘ತನ್ವಿ ದಿ ಗ್ರೇಟ್’ ಚಿತ್ರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈಗಾಗಲೇ ನೀರಜ್ ಅವರ ‘ಹೋಮ್‌ಬೌಂಡ್’ (Homebound) ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗದಲ್ಲಿ ಟಾಪ್ 15ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಭಾರತಕ್ಕೆ ಆಸ್ಕರ್ ಒಲಿಯುವ ಭರವಸೆ ಮೂಡಿದೆ.
ಏನಿದೆ ಕಥಾಹಂದರ? ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ ಚಾಪ್ಟರ್ 1’ ತುಳುನಾಡಿನ ದೈವಾರಾಧನೆಯ ಆಳವಾದ ಬೇರುಗಳನ್ನು ಮತ್ತು 4ನೇ ಶತಮಾನದ ಕದಂಬ ರಾಜವಂಶದ ಇತಿಹಾಸವನ್ನು ತೆರೆದಿಡಲಿದೆ. ಇದರಲ್ಲಿ ರಿಷಬ್ ಶೆಟ್ಟಿ ಕಾಂತಾರ ಅರಣ್ಯ ಮತ್ತು ಮೂಲನಿವಾಸಿಗಳ ರಕ್ಷಕನಾದ ‘ಬರ್ಮೆ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಅನುಪಮ್ ಖೇರ್ ನಿರ್ದೇಶನದ ‘ತನ್ವಿ ದಿ ಗ್ರೇಟ್’ ಚಿತ್ರವು ಆಟಿಸಂ ಮತ್ತು ಭಾರತೀಯ ಸೇನೆಯ ಹಿನ್ನೆಲೆಯ ಕಥೆಯನ್ನು ಒಳಗೊಂಡಿದೆ.
ಜನವರಿ 22 ರಂದು ಆಸ್ಕರ್ ಪ್ರಶಸ್ತಿಯ ಅಧಿಕೃತ ನಾಮಿನೇಷನ್ ಪಟ್ಟಿ ಪ್ರಕಟವಾಗಲಿದ್ದು, ಈ ಭಾರತೀಯ ಚಿತ್ರಗಳು ಅಂತಿಮ ಸುತ್ತಿಗೆ ಆಯ್ಕೆಯಾಗಲಿವೆಯೇ ಎಂಬುದು ತೀವ್ರ ಕುತೂಹಲ ಮೂಡಿಸಿದೆ.






