ಬೆಂಗಳೂರು: ತಂತ್ರಜ್ಞಾನ ಬೆಳೆದಂತೆ ರಾಜಕೀಯ ನಾಯಕರನ್ನು ಬಳಸಿಕೊಂಡು ಎಐ (ಕೃತಕ ಬುದ್ಧಿಮತ್ತೆ) ವಿಡಿಯೋಗಳನ್ನು ಸೃಷ್ಟಿಸುವುದು ಟ್ರೆಂಡ್ ಆಗುತ್ತಿದೆ. ಇದೀಗ ಕರ್ನಾಟಕದ ರಾಜಕೀಯ ನಾಯಕರ ಸರದಿ ಬಂದಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬೆಂಬಲ ಸೂಚಿಸುವ ಎಐ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಎಐ ಪಾತ್ರಗಳನ್ನು ಒಳಗೊಂಡಿರುವ ಈ ವಿಡಿಯೋವನ್ನು ಅಭಿಮಾನಿಯೊಬ್ಬರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, “2028ಕ್ಕೆ ಕಾಯುವಿಕೆ ಅಂತ್ಯಗೊಳ್ಳಲಿದೆ” ಎಂಬ ಕುತೂಹಲಕಾರಿ ಕ್ಯಾಪ್ಷನ್ ನೀಡಿದ್ದಾರೆ.
ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯ ಈ ವಿಡಿಯೋ ಅಕ್ಷರಶಃ ಸಿನಿಮೀಯ ಶೈಲಿಯಲ್ಲಿದೆ. ಇದರಲ್ಲಿ ಕೌಬಾಯ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಎಐ ಅವತಾರ, “ನಾವು ಈ ರಾಜ್ಯವನ್ನು ಶಾಂತಿಯುತವಾಗಿ ಲೂಟಿ ಮಾಡಲು ಬಯಸುತ್ತೇವೆ” ಎಂದು ಹೇಳುವ ಮೂಲಕ ವಿಡಿಯೋ ಆರಂಭವಾಗುತ್ತದೆ. ಬಳಿಕ ಸಿಎಂ ಸಿದ್ದರಾಮಯ್ಯ ಅವರ ಎಐ ಅವತಾರ, “ಎಚ್‌ಡಿಕೆ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುತ್ತಾರೆಯೇ?” ಎಂದು ಪ್ರಶ್ನಿಸುತ್ತದೆ. ಇದಕ್ಕೆ ಡಿಕೆಶಿ ಪಾತ್ರ “ನನಗೆ ಹಾಗೆ ಅನ್ನಿಸುತ್ತಿಲ್ಲ” ಎಂದು ಉತ್ತರಿಸುತ್ತದೆ. ಆದರೆ ಮರುಕ್ಷಣವೇ ಕಾರಿನಿಂದ ಇಳಿಯುವ ಎಚ್.ಡಿ.ಕುಮಾರಸ್ವಾಮಿ ಅವರು ಆಕ್ಷನ್ ಹೀರೋ ರೀತಿಯಲ್ಲಿ ಎಂಟ್ರಿ ಕೊಟ್ಟು “ಡ್ಯಾಡಿ ಈಸ್ ಹೋಮ್” (ಅಪ್ಪ ಮನೆಗೆ ಬಂದಿದ್ದಾರೆ) ಎಂದು ಮಾಸ್ ಡೈಲಾಗ್ ಹೊಡೆಯುವ ದೃಶ್ಯ ರೋಚಕವಾಗಿದೆ.
ಪ್ರಸ್ತುತ ಕೇಂದ್ರದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾಗಿರುವ ಕುಮಾರಸ್ವಾಮಿ ಅವರು ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುವ ಇಂಗಿತವನ್ನು ಈ ವಿಡಿಯೋ ಮೂಲಕ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ಈ ವೈರಲ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಡಿ.ಕೆ. ಸುರೇಶ್, “ಅವರು ರಾಜ್ಯಕ್ಕೆ ವಾಪಸ್ ಬರಬೇಕಾದರೆ ಮೊದಲು ತಮ್ಮ ಹಾಲಿ ಸ್ಥಾನಕ್ಕೆ (ಕೇಂದ್ರ ಸಚಿವ) ರಾಜೀನಾಮೆ ನೀಡಬೇಕು. ಅವರನ್ನು ಕೇಂದ್ರದಲ್ಲಿ ನೋಡಿ ನಿಮಗೆ ಖುಷಿಯಿಲ್ಲವೇ? ಅವರನ್ನು ಇಲ್ಲಿಗೆ ಯಾಕೆ ಕರೆಯುತ್ತಿದ್ದೀರಿ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜೆಡಿಎಸ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಕೆಲವರು “ನಮ್ಮ ಮತ ಕೇವಲ ಎಚ್‌ಡಿಕೆಗೆ ಮಾತ್ರ” ಎಂದು ಕಮೆಂಟ್ ಮಾಡಿದರೆ, ಇನ್ನು ಕೆಲವರು “ನಾವು ಕಾಯುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯ ಈ ವಿಡಿಯೋ ರಾಜಕೀಯ ವಲಯದಲ್ಲಿ ಮತ್ತು ನೆಟ್ಟಿಗರ ನಡುವೆ ನಗುವಿನ ಅಲೆಯ ಜೊತೆಗೆ ಚರ್ಚೆಯನ್ನೂ ಹುಟ್ಟುಹಾಕಿದೆ.






