ಬಳ್ಳಾರಿ: ಬಳ್ಳಾರಿಯ ಅಹಂಬಾವಿ ಪ್ರದೇಶದಲ್ಲಿರುವ ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದ ಬಳಿ ನಡೆದಿದ್ದ ಬ್ಯಾನರ್ ವಿವಾದ ಮತ್ತು ಗುಂಡಿನ ದಾಳಿ ಪ್ರಕರಣದ ತನಿಖೆ ಈಗ ಚುರುಕುಗೊಂಡಿದೆ. ಈವರೆಗೂ ಸ್ಥಳೀಯ ಪೊಲೀಸರು ನಡೆಸುತ್ತಿದ್ದ ತನಿಖೆಯನ್ನು ಈಗ ಸಿಐಡಿ ವಿಶೇಷ ತನಿಖಾ ತಂಡ (CID SIT) ಕೈಗೆತ್ತಿಕೊಳ್ಳಲಿದೆ.
ಪ್ರಕರಣದ ಹಿನ್ನೆಲೆ:
ಜನವರಿ 1ರಂದು ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಕಟ್ಟುವ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಭೀಕರ ಘರ್ಷಣೆ ನಡೆದಿತ್ತು. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಸಾವನ್ನಪ್ಪಿದ್ದರು. ಹಾಗೂ ತನ್ನ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಜನಾರ್ದನ ರೆಡ್ಡಿ ಆರೋಪಿಸಿದ್ದರು. ಇದೇ ವೇಳೆ ಜನಾರ್ದನ ರೆಡ್ಡಿ(Janardhana Reddy), ಸೋಮಶೇಖರ ರೆಡ್ಡಿ ಮತ್ತು ಶ್ರೀರಾಮುಲು (Sriramulu) ಸೇರಿ ಹಲವರ ವಿರುದ್ಧ ಬ್ರೂಸ್‌ಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಈವರೆಗೆ 26 ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರು ಮತ್ತು ಐಜಿಪಿ ವರ್ತಿಕಾ ಕಟಿಯಾರ್ ಅವರನ್ನು ಸರ್ಕಾರ ಈಗಾಗಲೇ ವರ್ಗಾವಣೆ ಮಾಡಿದೆ.
ಈ ಎಲ್ಲಾ ವಿದ್ಯಮಾನಗಳನ್ನು ಗಮನಸಿದ ಸರ್ಕಾರ ಹೆಚ್ಚಿನ ತನಿಖೆಗಾಗಿ ಸಿಐಟಿ ಅವರಿಗೆ ವಹಿಸಲಾಗಿದೆ. ಗಲಾಟೆಗೆ ಸಂಬಂಧಿಸಿ ಒಟ್ಟು 6 ಎಫ್‌ಐಆರ್ ದಾಖಲಾಗಿದ್ದವು. ಅದರಲ್ಲಿ ಅತ್ಯಂತ ಗಂಭೀರವಾದ 4 ಪ್ರಕರಣಗಳನ್ನು ಸಿಐಡಿಗೆ ಹಾಗೂ 2 ಪ್ರಕರಣಗಳನ್ನು ಡಿಸಿಆರ್‌ಇ (DCRE) ಠಾಣೆಗೆ ವರ್ಗಾಯಿಸಲಾಗಿದೆ.
ಸಿಐಡಿ ಡಿಐಜಿ ನೇತೃತ್ವದ ವಿಶೇಷ ತಂಡವು ಬಳ್ಳಾರಿಗೆ ಭೇಟಿ ನೀಡಿ ಸದ್ಯದಲ್ಲೇ ತನಿಖೆ ಆರಂಭಿಸಲಿದೆ ಎಂದು ತಿಳಿದು ಬಂದಿದೆ.






