ಬೆಂಗಳೂರು: ರಾಜ್ಯದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ (BJP-JDS) ಮೈತ್ರಿ ಮಾಡಿಕೊಳ್ಳಲಿವೆಯೇ ಎಂಬ ಪ್ರಶ್ನೆಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಮೈತ್ರಿ ವಿಚಾರ ಇನ್ನೂ ಅಂತಿಮಗೊಂಡಿಲ್ಲ ಮತ್ತು ಈ ಬಗ್ಗೆ ವರಿಷ್ಠರು ಮಾತ್ರ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಮೈತ್ರಿ ಬಗ್ಗೆ ಎರಡೂ ಪಕ್ಷಗಳ ಹಿರಿಯ ನಾಯಕರು (ವರಿಷ್ಠರು) ಮಾತ್ರ ತೀರ್ಮಾನ ಮಾಡುತ್ತಾರೆ. ಅದನ್ನು ಬಿಟ್ಟು ಬೇರೆ ಯಾರೇ ಮಾತನಾಡಿದರೂ ಅದಕ್ಕೆ ಬೆಲೆಯಿಲ್ಲ. ವಿಧಾನಸಭಾ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಬೆವರು ಹರಿಸುವ ಸಾಮಾನ್ಯ ಕಾರ್ಯಕರ್ತರಿಗೆ ಅಧಿಕಾರ ಸಿಗುವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ. ಆದ್ದರಿಂದ ಕಾರ್ಯಕರ್ತರ ಹಿತ ಕಾಪಾಡುವುದು ನಮ್ಮ ಮೊದಲ ಆದ್ಯತೆ ಎಂದರು.
ಮೈತ್ರಿಯಾದರೆ ತಮಗೆ ಟಿಕೆಟ್ ಕೈತಪ್ಪಬಹುದು ಎಂಬ ಆತಂಕ ಕೆಲವು ಕಾರ್ಯಕರ್ತರಲ್ಲಿದೆ. ಆದರೆ ಪಕ್ಷ ನಿಷ್ಠಾವಂತರಿಗೆ ಎಂದಿಗೂ ಅನ್ಯಾಯ ಮಾಡುವುದಿಲ್ಲ ಎಂದು ಭರವಸೆ ನೀಡಿದರು.






