ಮಂಗಳೂರು: “ಕರಾವಳಿ ಭಾಗವು ಸೌಂದರ್ಯ, ಅಪಾರ ಜ್ಞಾನ ಮತ್ತು ಸಂಪತ್ತಿನ ಪರ್ವತವಿದ್ದಂತೆ. ಇಲ್ಲಿನ 320 ಕಿ.ಮೀ. ಉದ್ದದ ಕಡಲ ತೀರವನ್ನು ಸಮರ್ಪಕವಾಗಿ ಬಳಸಿಕೊಂಡು, ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ‘ಕರಾವಳಿ ಪ್ರವಾಸೋದ್ಯಮ ನೀತಿ’ಯನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಮಂಗಳೂರಿನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಜನಪ್ರತಿನಿಧಿಗಳು, ಉದ್ಯಮಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರು ಮಾತನಾಡಿದರು. “ದೈವ, ದೇವಾಲಯಗಳ ನೆಲೆವೀಡಾಗಿರುವ ಕರಾವಳಿಯು ಪ್ರವಾಸಿಗರ ಸ್ವರ್ಗ. ಗೋವಾ ಮತ್ತು ನಮ್ಮ ಕರಾವಳಿಯ ಸೌಂದರ್ಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆದರೂ ಪ್ರವಾಸೋದ್ಯಮದಲ್ಲಿ ನಾವು ಗೋವಾಗಿಂತ ಹಿಂದಿದ್ದೇವೆ. ನಮ್ಮಲ್ಲಿರುವ 320 ಕಿ.ಮೀ ಕಡಲ ತೀರದ ಸಂಪನ್ಮೂಲವನ್ನು ಬಳಸಿಕೊಳ್ಳುವಲ್ಲಿ ನಾವು ಎಡವಿದ್ದೇವೆ. ಇದನ್ನು ಸರಿಪಡಿಸಲು ಸಿಆರ್ಝಡ್ (CRZ) ಸೇರಿದಂತೆ ಇರುವ ಕಾನೂನು ಅಡಚಣೆಗಳನ್ನು ನಿವಾರಿಸಿ, ಹೂಡಿಕೆದಾರರನ್ನು ಸೆಳೆಯಲು ಪ್ರತ್ಯೇಕ ನೀತಿಯ ಅಗತ್ಯವಿದೆ” ಎಂದು ಅವರು ತಿಳಿಸಿದರು.
ಪ್ರತಿಭೆಗಳ ಪಲಾಯನ ತಡೆಯಬೇಕು:
ಕರಾವಳಿ ಭಾಗದ ಮಾನವ ಸಂಪನ್ಮೂಲದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಿಸಿಎಂ, “ದೇಶಕ್ಕೆ ಶಿಸ್ತಿನ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಲಿಸಿಕೊಟ್ಟವರು ನೀವು. ಇಲ್ಲಿನಷ್ಟು ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳು ಬೇರೆಲ್ಲೂ ಇಲ್ಲ. ಆದರೆ, ಇಲ್ಲಿ ತಯಾರಾಗುವ ಪ್ರತಿಭಾವಂತ ಯುವಕರು ಉದ್ಯೋಗ ಅರಸಿ ಬೆಂಗಳೂರು, ಮುಂಬೈ ಅಥವಾ ವಿದೇಶಗಳಿಗೆ ಹೋಗುತ್ತಿದ್ದಾರೆ. ನಮ್ಮ ಯುವಕರ ಶ್ರಮ ಮತ್ತು ಪ್ರತಿಭೆ ಈ ಮಣ್ಣಿನ ಅಭಿವೃದ್ಧಿಗೆ ಬಳಕೆಯಾಗಬೇಕು. ಅದಕ್ಕಾಗಿ ಇಲ್ಲಿಯೇ ಉದ್ಯೋಗ ಸೃಷ್ಟಿಯಾಗಬೇಕು” ಎಂದು ಆಶಯ ವ್ಯಕ್ತಪಡಿಸಿದರು.
ರಾತ್ರಿ 7 ಗಂಟೆಯ ನಂತರವೂ ಕರಾವಳಿ ಬದುಕಬೇಕು:
“ಈ ಹಿಂದೆ ಕರಾವಳಿ ಭಾಗ ರಾತ್ರಿ 7 ಗಂಟೆಯ ನಂತರ ಸ್ತಬ್ಧವಾಗುತ್ತದೆ ಎಂದು ನಾನು ಹೇಳಿದ್ದೆ. ಆ ಮಾತನ್ನು ಕೆಲವರು ಟೀಕಿಸಿದರೆ, ಇನ್ನು ಕೆಲವರು ಸ್ವಾಗತಿಸಿದ್ದರು. ನನ್ನ ಆ ಮಾತನ್ನು ಸುಳ್ಳು ಮಾಡುವ ಛಲ ಇಲ್ಲಿನ ಉದ್ಯಮಿಗಳಿಗೆ ಬರಲಿ ಎಂಬುದು ನನ್ನ ಉದ್ದೇಶವಾಗಿತ್ತು. ಪ್ರವಾಸೋದ್ಯಮ ಬೆಳೆಯಬೇಕಾದರೆ ರಾತ್ರಿ ಜೀವನವೂ ಮುಖ್ಯ. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಎಲ್ಲಾ ಜನಪ್ರತಿನಿಧಿಗಳು ಅಭಿವೃದ್ಧಿಗೆ ಕೈಜೊಡಿಸಿದ್ದಾರೆ. ರಾಜಕೀಯ ಬದಿಗಿಟ್ಟು, ಸಿಕ್ಕ ಅವಕಾಶದಲ್ಲಿ ಶಾಶ್ವತವಾಗಿ ಉಳಿಯುವ ಕೆಲಸ ಮಾಡೋಣ” ಎಂದು ಡಿಕೆಶಿ ಕರೆ ನೀಡಿದರು.
ಮುಂದಿನ ದಿನಗಳಲ್ಲಿ ತಜ್ಞರು, ಹೂಡಿಕೆದಾರರು ಮತ್ತು ಸಾರ್ವಜನಿಕರ ಸಲಹೆಗಳನ್ನು ಕ್ರೋಢೀಕರಿಸಿ, ಮುಖ್ಯಮಂತ್ರಿಗಳು ಹಾಗೂ ಪ್ರವಾಸೋದ್ಯಮ ಸಚಿವರೊಂದಿಗೆ ಚರ್ಚಿಸಿ ನೂತನ ನೀತಿಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ಅವರು ಭರವಸೆ ನೀಡಿದರು.






