ಬೆಂಗಳೂರು: ನಗರದ ಬಾಣಸವಾಡಿ ಸಮೀಪದ ಕಲ್ಕೆರೆಯಲ್ಲಿ (Kalkere) ತಡರಾತ್ರಿ ಅಗ್ನಿ ದೇವನ ಅಟ್ಟಹಾಸ ಮೆರೆದಿದ್ದಾನೆ. ಫರ್ನಿಚರ್ ಗೋಡೌನ್ (Furniture Godown) ಒಂದರಲ್ಲಿ ಕಾಣಿಸಿಕೊಂಡ ಸಣ್ಣ ಕಿಡಿ, ಕ್ಷಣಾರ್ಧದಲ್ಲಿ ಹೆಮ್ಮಾರಿಯಾಗಿ ವ್ಯಾಪಿಸಿದ್ದು, ನಾಲ್ಕು ಬೃಹತ್ ಗೋಡೌನ್‌ಗಳನ್ನು ಸುಟ್ಟು ಕರಕಲಾಗಿಸಿದೆ.
ಕಲ್ಕೆರೆಯ ಫರ್ನಿಚರ್ ಶೀಟ್ ಫ್ಯಾಕ್ಟರಿ ಮತ್ತು ಪೊರಕೆ ಗೋಡೌನ್‌ನಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಒಣಗಿದ ಮರದ ಸಾಮಗ್ರಿಗಳು ಮತ್ತು ಪೊರಕೆಗಳು ಇದ್ದ ಕಾರಣ ಬೆಂಕಿ ಅತೀ ವೇಗವಾಗಿ ಪಕ್ಕದ ಗೋಡೌನ್‌ಗಳಿಗೂ ಹರಡಿತು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ 4 ಅಗ್ನಿಶಾಮಕ ದಳದ ವಾಹನಗಳು ಸತತವಾಗಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ. ಪೊರಕೆ ಗೋಡೌನ್‌ನಲ್ಲಿ ಬೆಂಕಿ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಾರದೆ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ (Short Circuit) ನಿಂದಾಗಿ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಗೋಡೌನ್‌ಗಳಲ್ಲಿ ಭದ್ರತಾ ನಿಯಮಗಳ ಪಾಲನೆಯ ಬಗ್ಗೆ ತನಿಖೆ ನಡೆಯಬೇಕಿದೆ.
ಇದರಿಂ ಲಕ್ಷಾಂತರ ಮೌಲ್ಯದ ಮರದ ಸಾಮಗ್ರಿಗಳು, ಫರ್ನಿಚರ್ ಶೀಟ್‌ಗಳು ಮತ್ತು ಪೊರಕೆಗಳು ಬೂದಿಯಾಗಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.






