ವಿಜಯಪುರ: ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭವು ಒಂದು ‘ಸಿಹಿ’ ಕಹಿ ಘಟನೆಗೆ ಸಾಕ್ಷಿಯಾಗಿದೆ. ಸಚಿವ ಎಂ.ಬಿ. ಪಾಟೀಲ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ನಡೆಯು ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಚಿವ ಎಂ.ಬಿ. ಪಾಟೀಲ್ ತಮ್ಮ ಮನೆಯಲ್ಲಿ ತಯಾರಿಸಿದ ವಿಶೇಷ ಲಡ್ಡನ್ನು ಸಿದ್ದರಾಮಯ್ಯ ಅವರಿಗೆ ನೀಡಿ ಸಂಭ್ರಮಿಸಿದರು. ಇದೇ ವೇಳೆ ಎಂ.ಬಿ. ಪಾಟೀಲ್ (MB Patil) ಅವರು ಅದೇ ಲಡ್ಡನ್ನು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರ ಕೈಗೆ ನೀಡಿ, ಮುಖ್ಯಮಂತ್ರಿಗಳಿಗೆ ತಿನ್ನಿಸುವಂತೆ ವಿನಂತಿಸಿದರು. ಮೊದಲು ಹಿಂದೇಟು ಹಾಕಿದರೂ, ಎಂ.ಬಿ. ಪಾಟೀಲ್ ಅವರ ಒತ್ತಾಯಕ್ಕೆ ಮಣಿದ ಡಿಕೆಶಿ ಅವರು ಲಡ್ಡು ತೆಗೆದುಕೊಂಡು ಸಿಎಂ ಬಾಯಿಗೆ ಇಟ್ಟರು.
ಡಿಕೆಶಿ ಅವರು ಸಿಹಿ ತಿನ್ನಿಸಿದ ತಕ್ಷಣವೇ ಸಿದ್ದರಾಮಯ್ಯ ಅವರು ಆ ಲಡ್ಡನ್ನು ಬಾಯಿಂದ ತೆಗೆದು ಹೊರಗೆ ಬಿಸಾಡಿದ್ದಾರೆ. ಈ ದೃಶ್ಯ ವೇದಿಕೆಯ ಮೇಲಿದ್ದ ಗಣ್ಯರು ಮತ್ತು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದೆ.
ಚರ್ಚೆಗೆ ಕಾರಣವಾದ ನಡೆ:
ದೀರ್ಘಕಾಲದ ಸಿಎಂ ಎಂಬ ದಾಖಲೆಯ ಸಂಭ್ರಮದಲ್ಲಿ ನಡೆದ ಈ ಘಟನೆಯು “ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಎಲ್ಲವೂ ಸರಿಯಿಲ್ಲವೇ?” ಎಂಬ ಅನುಮಾನಗಳಿಗೆ ಮತ್ತೆ ರೆಕ್ಕೆಪುಕ್ಕ ನೀಡಿದೆ. ಆರೋಗ್ಯದ ಕಾರಣವೋ ಅಥವಾ ಬೇರೆ ಯಾವುದಾದರೂ ಮುನಿಸೋ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿಶ್ಲೇಷಣೆಗಳು ನಡೆಯುತ್ತಿವೆ.






