ಬೆಂಗಳೂರು: ರಾಜಧಾನಿಯ ಮಾಗಡಿ ರಸ್ತೆಯಲ್ಲಿ ನಡುರಸ್ತೆಯಲ್ಲೇ ಪತ್ನಿಯನ್ನು ಪಿಸ್ತೂಲ್‌ನಿಂದ ಗುಂಡಿಕ್ಕಿ ಕೊ*ಲೆ ಮಾಡಿದ್ದ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಪತ್ನಿ ಭುವನೇಶ್ವರಿಯನ್ನು ಹ*ತ್ಯೆಗೈದು ಜೈಲು ಸೇರಿರುವ ಆರೋಪಿ ಪತಿ ಬಾಲಮುರುಗನ್, ಕೃತ್ಯಕ್ಕೂ ಮುನ್ನ ಪತ್ನಿಯ ಹತ್ಯೆಗೆ ಬೇರೊಬ್ಬನಿಗೆ ಸುಪಾರಿ ನೀಡಿದ್ದ ಎಂಬ ಆಘಾತಕಾರಿ ವಿಚಾರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿ ರಸ್ತೆ ಪೊಲೀಸರು ತಮಿಳುನಾಡು ಮೂಲದ ಮೌಳೇಶ್ ಎಂಬ ರೌಡಿಯನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಡಿಸೆಂಬರ್ 23ರ ಸಂಜೆ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತಿ ಬಾಲಮುರುಗನ್ ತನ್ನ ಪತ್ನಿ ಭುವನೇಶ್ವರಿ ಮೇಲೆ ಗುಂಡು ಹಾರಿಸಿ ಬರ್ಬರವಾಗಿ ಹ*ತ್ಯೆ ಮಾಡಿ, ಬಳಿಕ ಪೊಲೀಸರಿಗೆ ಶರಣಾಗಿದ್ದ. ಆದರೆ ಈ ಕೊ*ಲೆಯ ಹಿಂದಿನ ಪಿತೂರಿ ಇದೀಗ ಬಾಯಿಬಿಟ್ಟಿದ್ದಾನೆ. ಕೊ*ಲೆಗೂ ಮುನ್ನ ತಮಿಳುನಾಡಿನ ಸೇಲಂಗೆ ತೆರಳಿದ್ದ ಬಾಲಮುರುಗನ್, ಅಲ್ಲಿನ ಸಂಬಂಧಿಕರ ಹೋಟೆಲ್ ಒಂದರಲ್ಲಿ ಪುಡಿರೌಡಿ ಮೌಳೇಶ್‌ನನ್ನು ಭೇಟಿಯಾಗಿದ್ದ. ಈ ವೇಳೆ ತನ್ನ ಪತ್ನಿ ಭುವನೇಶ್ವರಿಯನ್ನು ಕೊ*ಲೆ ಮಾಡುವಂತೆ ಆತನಿಗೆ ಲಕ್ಷ ಲಕ್ಷ ಹಣದ ಆಫರ್ ನೀಡಿದ್ದಲ್ಲದೆ, ಕೃತ್ಯ ಎಸಗಲು ಪಿಸ್ತೂಲ್ ಅನ್ನೂ ನೀಡಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಬಾಲಮುರುಗನ್ ನೀಡಿದ ಸುಪಾರಿಯಂತೆ ಬೆಂಗಳೂರಿಗೆ ಬಂದಿದ್ದ ಮೌಳೇಶ್, ಭುವನೇಶ್ವರಿ ಕೆಲಸ ಮಾಡುತ್ತಿದ್ದ ಸ್ಥಳ ಹಾಗೂ ಅವರು ಓಡಾಡುವ ರಸ್ತೆಗಳಲ್ಲಿ ಓಡಾಟ ನಡೆಸಿದ್ದ. ಸಿಸಿಟಿವಿ ಕ್ಯಾಮೆರಾಗಳಿಲ್ಲದ ನಿರ್ಜನ ಪ್ರದೇಶದಲ್ಲಿ ಹ*ತ್ಯೆ ಮಾಡಲು ಸಂಚು ರೂಪಿಸಿದ್ದ. ಆದರೆ, ಈ ಕೃತ್ಯ ಎಸಗಲು ತನಗೆ ಇನ್ನೂ ಎರಡರಿಂದ ಮೂರು ತಿಂಗಳು ಕಾಲಾವಕಾಶ ಬೇಕು ಎಂದು ಮೌಳೇಶ್ ಹೇಳಿದ್ದ. ಇದರಿಂದ ಕೋಪಗೊಂಡ ಬಾಲಮುರುಗನ್, ಸುಪಾರಿ ಹಂತಕನಿಂದ ಕೆಲಸವಾಗುವುದಿಲ್ಲ ಎಂದು ತೀರ್ಮಾನಿಸಿ, ತಾನೇ ಪಿಸ್ತೂಲ್ ಹಿಡಿದು ಪತ್ನಿಯನ್ನು ಮುಗಿಸಲು ನಿರ್ಧರಿಸಿದ್ದ. ಅದರಂತೆ ಡಿ.23 ರಂದು ಪತ್ನಿಯನ್ನು ಅಡ್ಡಗಟ್ಟಿ ಗುಂಡಿಕ್ಕಿ ಕೊ*ಲೆ ಮಾಡಿದ್ದ.
ಸದ್ಯ ಮಾಗಡಿ ರಸ್ತೆ ಪೊಲೀಸರು ಆರೋಪಿ ಬಾಲಮುರುಗನ್ ಮತ್ತು ಸುಪಾರಿ ಪಡೆದಿದ್ದ ಮೌಳೇಶ್ ಇಬ್ಬರನ್ನೂ ಮುಖಾಮುಖಿ ಕೂರಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಬಾಲಮುರುಗನ್ ಜೊತೆ ಸಂಪರ್ಕದಲ್ಲಿದ್ದ ಇತರೆ ವ್ಯಕ್ತಿಗಳನ್ನು ಸಹ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.






