ಕೇಪ್ ಟೌನ್: ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಸ್ವಲ್ಪ ಮುಂಚಿತವಾಗಿಯೇ ವಿದಾಯ ಹೇಳಿದರು ಎಂದು ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್ ದಿಗ್ಗಜ ಅಲನ್ ಡೊನಾಲ್ಡ್ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಕೊಹ್ಲಿ ಅವರಲ್ಲಿ ಇನ್ನೂ ಕ್ರಿಕೆಟ್ ಹಸಿವು ಉಳಿದಿದ್ದು, 2027ರ ಏಕದಿನ ವಿಶ್ವಕಪ್‌ವರೆಗೂ ಅವರು ಆಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಸ್‌ಎ20 (SA20) ಲೀಗ್ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಡೊನಾಲ್ಡ್, ಕೊಹ್ಲಿ ಅವರ ಫಿಟ್ನೆಸ್ ಮತ್ತು ಆಟದ ಬದ್ಧತೆಯನ್ನು ಶ್ಲಾಘಿಸಿದರು. 2014-15ರ ಐಪಿಎಲ್ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡುವಾಗ ಕೊಹ್ಲಿ ಅವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದ ಡೊನಾಲ್ಡ್, ಕೊಹ್ಲಿ ಅವರ ‘ವರ್ಕ್ ಎಥಿಕ್ಸ್’ (ಕೆಲಸದ ಶಿಸ್ತು) ಅದ್ಭುತವಾಗಿದೆ ಎಂದು ಸ್ಮರಿಸಿಕೊಂಡರು.
“ನಾನು ವಿರಾಟ್ ಕೊಹ್ಲಿ ಅವರಲ್ಲಿ ಕಂಡಂತಹ ಆಟದ ಹಸಿವನ್ನು ಬೇರೆ ಯಾವುದೇ ಆಟಗಾರನಲ್ಲಿ ಕಂಡಿಲ್ಲ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಡ್ರೆಸ್ಸಿಂಗ್ ರೂಮ್‌ಗಳಲ್ಲಿ ನಾನು ಆಗಾಗ್ಗೆ ಅವರ ಬಗ್ಗೆ ಮಾತನಾಡುತ್ತೇನೆ. ಅವರು ಒಬ್ಬ ‘ಚಾಂಪಿಯನ್ ಟ್ರೈನರ್’. ಅವರಂತೆ ಕಠಿಣ ತರಬೇತಿ ನಡೆಸುವವರು ಯಾರೂ ಇಲ್ಲ. ಕೊಹ್ಲಿ ನಿಜಕ್ಕೂ ಒಂದು ಯಂತ್ರವಿದ್ದಂತೆ” ಎಂದು ಡೊನಾಲ್ಡ್ ಬಣ್ಣಿಸಿದ್ದಾರೆ. ಟೆಸ್ಟ್ ಮಾದರಿಗೆ ವಿದಾಯ ಹೇಳಿದ್ದರೂ, ಏಕದಿನ ಮಾದರಿಯಲ್ಲಿ ಕೊಹ್ಲಿ ಅಬ್ಬರ ಮುಂದುವರೆಯಲಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ.






