ನವದೆಹಲಿ: ತಮ್ಮ ಸುಮಧುರ ಕಂಠದ ಮೂಲಕ ಕೋಟ್ಯಂತರ ಜನರ ಮನಗೆದ್ದಿದ್ದ ‘ಇಂಡಿಯನ್ ಐಡಲ್ ಸೀಸನ್ 3’ ವಿಜೇತ ಹಾಗೂ ಜನಪ್ರಿಯ ನಟ ಪ್ರಶಾಂತ್ ತಮಂಗ್ (43) ಅವರು ನಿಧನರಾಗಿದ್ದಾರೆ. ಜನವರಿ 10 ರಂದು ಹೃದಯಾಘಾತದಿಂದ ಅವರು ಇಹಲೋಕ ತ್ಯಜಿಸಿದ್ದು, ಅವರ ಅಗಲಿಕೆಗೆ ಮನರಂಜನಾ ಲೋಕ ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಡಾರ್ಜಿಲಿಂಗ್ ಮೂಲದವರಾದ ಪ್ರಶಾಂತ್ ತಮಂಗ್, ಗಾಯಕರಾಗಿ ಅಷ್ಟೇ ಅಲ್ಲದೆ ನಟರಾಗಿಯೂ ಗುರುತಿಸಿಕೊಂಡಿದ್ದರು. ದಿಢೀರ್ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಅವರನ್ನು ನವದೆಹಲಿಯ ದ್ವಾರಕಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಅವರ ಕುಟುಂಬದವರು ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಶಾಂತ್ ತಮಂಗ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. “ಸಣ್ಣ ಪಟ್ಟಣದಿಂದ ಬಂದು ಇಂಡಿಯನ್ ಐಡಲ್ ಗೆಲ್ಲುವವರೆಗಿನ ಅವರ ಸ್ಪೂರ್ತಿದಾಯಕ ಪ್ರಯಾಣ ಮತ್ತು ಅವರ ಕಂಠಸಿರಿ ಅನೇಕರ ಮನ ಮುಟ್ಟಿತ್ತು. ಅವರ ಅಕಾಲಿಕ ಮರಣದಿಂದ ತೀವ್ರ ದುಃಖವಾಗಿದೆ” ಎಂದು ಎಕ್ಸ್‌ನಲ್ಲಿ (ಟ್ವಿಟರ್) ಬರೆದುಕೊಂಡಿದ್ದಾರೆ. ಹಾಗೆಯೇ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಕೂಡ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ವೃತ್ತಿಜೀವನ ಮತ್ತು ಸಾಧನೆ: 2010ರಲ್ಲಿ ‘ಗೋರ್ಖಾ ಪಲ್ಟನ್’ ನೇಪಾಳಿ ಚಿತ್ರದ ಮೂಲಕ ನಟನೆಗೆ ಕಾಲಿಟ್ಟ ಪ್ರಶಾಂತ್, ನಂತರ ‘ಅಂಗಾಲೋ ಯೋ ಮಾಯಾ ಕೋ’, ‘ಪರ್ದೇಸಿ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ‘ಪಾತಾಳ್ ಲೋಕ್ ಸೀಸನ್ 2’ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅಲ್ಲದೆ, ಸಲ್ಮಾನ್ ಖಾನ್ ಅವರ ಮುಂಬರುವ ‘ಬ್ಯಾಟಲ್ ಆಫ್ ಗಾಲ್ವಾನ್’ ಚಿತ್ರದಲ್ಲೂ ಅವರು ನಟಿಸಬೇಕಿತ್ತು ಎಂದು ವರದಿಯಾಗಿದೆ. ಮೃತರು ಪತ್ನಿ ಮಾರ್ಥಾ ತಮಂಗ್ ಮತ್ತು ಮಗಳು ಅರಿಯಾ ಅವರನ್ನು ಅಗಲಿದ್ದಾರೆ.






