ನವದೆಹಲಿ: ಇತ್ತೀಚೆಗೆ ಜಗತ್ತಿನಾದ್ಯಂತ ಅನೇಕ ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಪಾಸ್‌ವರ್ಡ್ ರಿಸೆಟ್ ಮಾಡುವಂತೆ ದಿಢೀರ್ ಇಮೇಲ್‌ಗಳು ಬಂದಿದ್ದು, ಇದು ಭಾರೀ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಇದು ಯಾವುದೇ ಹ್ಯಾಕಿಂಗ್ ಅಥವಾ ಡೇಟಾ ಕಳ್ಳತನದ (Data Breach) ಪ್ರಕರಣವಲ್ಲ, ಬದಲಿಗೆ ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ಮೆಟಾ ಒಡೆತನದ ಇನ್‌ಸ್ಟಾಗ್ರಾಮ್ ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಸಂಸ್ಥೆ, “ಬಾಹ್ಯ ವ್ಯಕ್ತಿಗಳು ಕೆಲವರ ಪಾಸ್‌ವರ್ಡ್ ರಿಸೆಟ್ ಇಮೇಲ್‌ಗಳನ್ನು ವಿನಂತಿಸಲು ಅವಕಾಶ ಮಾಡಿಕೊಡುತ್ತಿದ್ದ ತಾಂತ್ರಿಕ ದೋಷವನ್ನು ನಾವು ಸರಿಪಡಿಸಿದ್ದೇವೆ. ನಮ್ಮ ಸಿಸ್ಟಂಗಳಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಮತ್ತು ನಿಮ್ಮ ಇನ್‌ಸ್ಟಾಗ್ರಾಮ್ ಖಾತೆಗಳು ಸುರಕ್ಷಿತವಾಗಿವೆ. ಗೊಂದಲಕ್ಕೆ ವಿಷಾದಿಸುತ್ತೇವೆ, ಅಂತಹ ಇಮೇಲ್‌ಗಳನ್ನು ನೀವು ನಿರ್ಲಕ್ಷಿಸಬಹುದು” ಎಂದು ತಿಳಿಸಿದೆ. ಅನೇಕ ದೇಶಗಳಲ್ಲಿ ಬಳಕೆದಾರರು ತಮಗೆ ಗೊತ್ತಿಲ್ಲದೆಯೇ ಪಾಸ್‌ವರ್ಡ್ ಬದಲಾಯಿಸುವಂತೆ ಇಮೇಲ್ ಬಂದಿರುವುದಾಗಿ ದೂರಿಕೊಂಡ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಹೊರಬಿದ್ದಿದೆ.
ಆದರೆ, ಸೈಬರ್ ಭದ್ರತಾ ಸಂಸ್ಥೆಯಾದ ಮಾಲ್‌ವೇರ್‌ಬೈಟ್ಸ್ (Malwarebytes) ಬೇರೆಯದ್ದೇ ವಾದ ಮಂಡಿಸಿದೆ. ಸುಮಾರು 1.75 ಕೋಟಿ (17.5 ಮಿಲಿಯನ್) ಇನ್‌ಸ್ಟಾಗ್ರಾಮ್ ಖಾತೆಗಳ ಡೇಟಾ ಸೋರಿಕೆಯಾಗಿದೆ ಎಂದು ಅದು ಎಚ್ಚರಿಸಿದೆ. ಸೈಬರ್ ಕಳ್ಳರು ಬಳಕೆದಾರರ ಹೆಸರು, ವಿಳಾಸ, ಫೋನ್ ಸಂಖ್ಯೆ ಮತ್ತು ಇಮೇಲ್ ವಿಳಾಸಗಳನ್ನು ಕದ್ದಿದ್ದು, ಈ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಆದರೆ ಇನ್‌ಸ್ಟಾಗ್ರಾಮ್ ಈ ಆರೋಪವನ್ನು ತಳ್ಳಿಹಾಕಿದ್ದು, ಖಾತೆಗಳು ಸುರಕ್ಷಿತವಾಗಿವೆ ಎಂದು ಪುನರುಚ್ಚರಿಸಿದೆ.
ಈ ಗೊಂದಲದ ನಡುವೆ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆತಂಕವನ್ನು ತೋಡಿಕೊಂಡಿದ್ದಾರೆ. “ಕಳೆದ ಎರಡು ವಾರಗಳಿಂದ ಪಾಸ್‌ವರ್ಡ್ ಬದಲಾಯಿಸುವಂತೆ ನನಗೆ ಮೆಟಾ ಇಮೇಲ್‌ಗಳು ಬರುತ್ತಲೇ ಇವೆ” ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು “ನನ್ನ ಖಾತೆಯನ್ನು ಯಾರೋ ಪ್ರವೇಶಿಸಲು ಯತ್ನಿಸಿದ ಇಮೇಲ್ ಬಂತು, ತಕ್ಷಣ ಪಾಸ್‌ವರ್ಡ್ ಬದಲಾಯಿಸಿದೆ” ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ, ಪಾಸ್‌ವರ್ಡ್ ರಿಸೆಟ್ ಇಮೇಲ್‌ಗಳು ಬಳಕೆದಾರರಲ್ಲಿ ತಲ್ಲಣ ಮೂಡಿಸಿರುವುದಂತೂ ಸತ್ಯ.






