ಕಾರವಾರ: ತಾಲೂಕಿನ ಖಾಸಗಿ ಶಾಲೆಯೊಂದರಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಶಾಲೆ ಮುಗಿದ ಬಳಿಕ ಮನೆಗೆ ಮರಳದೇ ನಾಪತ್ತೆಯಾಗಿದ್ದ ಘಟನೆ ಶನಿವಾರ ಕೆಲಕಾಲ ಆತಂಕ ಮೂಡಿಸಿತ್ತು. ಆದರೆ, ಸಮಯೋಚಿತ ಮಾಹಿತಿ ಮತ್ತು ತ್ವರಿತ ಕಾರ್ಯಾಚರಣೆಯಿಂದ ಮಕ್ಕಳು ಸುರಕ್ಷಿತವಾಗಿ ಪತ್ತೆಯಾಗಿದ್ದು, ಪಾಲಕರು ಮತ್ತು ಶಿಕ್ಷಕರು ನಿಟ್ಟುಸಿರು ಬಿಡುವಂತಾಗಿದೆ.
ಶನಿವಾರ ಮಧ್ಯಾಹ್ನ ಶಾಲೆ ಮುಗಿದ ನಂತರ ಇಬ್ಬರು ವಿದ್ಯಾರ್ಥಿಗಳು ಸೈಕಲ್‌ನಲ್ಲಿ ಶಿರವಾಡ ರೈಲ್ವೆ ನಿಲ್ದಾಣದತ್ತ ತೆರಳಿದ್ದರು. ರೈಲು ನಿಲ್ದಾಣದ ದಾರಿ ಸ್ಪಷ್ಟವಾಗಿ ತಿಳಿಯದೇ ಮಾರ್ಗಮಧ್ಯೆ ಸಾರ್ವಜನಿಕರನ್ನು ಪ್ರಶ್ನಿಸುತ್ತಾ ಸಾಗುತ್ತಿದ್ದರು ಎನ್ನಲಾಗಿದೆ. ಈ ವೇಳೆ, ಅದೇ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಅವರು ದಾರಿ ಕೇಳುತ್ತಿರುವುದನ್ನು ಗಮನಿಸಿ ತಕ್ಷಣವೇ ವಿಷಯವನ್ನು ನಾಪತ್ತೆಯಾದ ಮಕ್ಕಳ ಪಾಲಕರಿಗೆ ತಿಳಿಸಿದ್ದಾನೆ.
ಮಕ್ಕಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಪಾಲಕರು ಮತ್ತು ಶಿಕ್ಷಕರು, ಬಾಲಕ ನೀಡಿದ ಸುಳಿವಿನ ಮೇರೆಗೆ ಶಿರವಾಡ ರೈಲ್ವೆ ನಿಲ್ದಾಣಕ್ಕೆ ಧಾವಿಸಿ ಹುಡುಕಾಟ ನಡೆಸಿದರು. ನಿಲ್ದಾಣದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಇಬ್ಬರು ವಿದ್ಯಾರ್ಥಿಗಳು ದೆಹಲಿ ಕಡೆಗೆ ತೆರಳುವ ರೈಲನ್ನು ಹತ್ತಿರುವುದು ದೃಢಪಟ್ಟಿತು. ಕೂಡಲೇ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಹೈ ಅಲರ್ಟ್ ಘೋಷಿಸಲಾಯಿತು.
ಮಾಹಿತಿಯ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸರು, ಚಲಿಸುತ್ತಿದ್ದ ರೈಲನ್ನು ತಡೆದು ಗೋವಾದ ಮಡಗಾಂವ್ ರೈಲ್ವೆ ನಿಲ್ದಾಣದಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಪತ್ತೆಹಚ್ಚಿದರು. ಬಳಿಕ ಮಕ್ಕಳ ಆರೋಗ್ಯ ಪರಿಶೀಲನೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳು ಪಾಲಕರಿಗೆ ಮಾಹಿತಿ ನೀಡಿದರು. ಈ ಘಟನೆ ಕಾರವಾರದಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದರೂ, ಸಹಪಾಠಿಯ ಸಮಯೋಚಿತ ಎಚ್ಚರಿಕೆ ಹಾಗೂ ರೈಲ್ವೆ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ.






