ಚಿತ್ರದುರ್ಗ: ತಮಿಳುನಾಡು ಪ್ರವಾಸ ಮುಗಿಸಿ ಸಂತೋಷದಿಂದ ಊರಿಗೆ ಮರಳುತ್ತಿದ್ದವರ ಬಾಳಲ್ಲಿ ವಿಧಿಯಾಟ ಬೇರೆಯೇ ಆಗಿತ್ತು. ಚಾಲಕನ ನಿಯಂತ್ರಣ ತಪ್ಪಿ ಮಹಾರಾಷ್ಟ್ರ ಮೂಲದ ಡಿವೈಎಸ್ಪಿ ಅವರ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಪೊಲೀಸ್ ಅಧಿಕಾರಿ ತಾಯಿ ಹಾಗೂ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕೋಟೆನಾಡು ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗದ ತಮಟಕಲ್ಲು ಗ್ರಾಮದ ಬ್ರಿಡ್ಜ್ ಬಳಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಮಹಾರಾಷ್ಟ್ರ ಡಿವೈಎಸ್ಪಿ ಅವರ ತಾಯಿ ಕಮಲ(69) ಹಾಗೂ ಕಾರು ಚಾಲಕ ರಾಕೇಶ್(40) ಎಂದು ಗುರುತಿಸಲಾಗಿದೆ. ಇವರು ಕುಟುಂಬ ಸಮೇತರಾಗಿ ತಮಿಳುನಾಡಿನ ಪ್ರವಾಸ ಮುಗಿಸಿಕೊಂಡು ವಾಪಸ್ ಮಹಾರಾಷ್ಟ್ರ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರವಾಸದ ಖುಷಿಯಲ್ಲಿದ್ದ ಕುಟುಂಬದಲ್ಲಿ ಇದೀಗ ನೀರವ ಮೌನ ಆವರಿಸಿದೆ.






