ಸಿಂಧ್ (ಪಾಕಿಸ್ತಾನ): ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮತ್ತೊಂದು ಅಮಾನುಷ ಘಟನೆ ವರದಿಯಾಗಿದ್ದು, ಜಮೀನಿನಲ್ಲಿ ಸೂರು (ಶೆಲ್ಟರ್) ನಿರ್ಮಿಸಿಕೊಂಡಿದ್ದಕ್ಕೆ 23 ವರ್ಷದ ಹಿಂದು ರೈತನನ್ನು ಭೂಮಾಲೀಕನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ಘಟನೆಯು ಅಲ್ಪಸಂಖ್ಯಾತ ಹಿಂದು ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ವ್ಯಾಪಕ ಪ್ರತಿಭಟನೆಗಳಿಗೆ ಎಡೆಮಾಡಿಕೊಟ್ಟಿದೆ.
ಮೃತ ಯುವಕನನ್ನು ಕೆಲಾಶ್ ಕೊಹ್ಲಿ (23) ಎಂದು ಗುರುತಿಸಲಾಗಿದೆ. ಬದಿನ್ ಜಿಲ್ಲೆಯ ತಲ್ಹಾರ್ ಗ್ರಾಮದಲ್ಲಿ ಜನವರಿ 4 ರಂದು ಈ ಘಟನೆ ನಡೆದಿದೆ. ಭೂಮಾಲೀಕ ಸರ್ಫರಾಜ್ ನಿಜಾಮನಿ ಎಂಬಾತನ ಜಮೀನಿನಲ್ಲಿ ಕೊಹ್ಲಿ ಆಶ್ರಯಕ್ಕಾಗಿ ಸೂರು ನಿರ್ಮಿಸುತ್ತಿದ್ದರು. ಇದನ್ನು ವಿರೋಧಿಸಿ ನಿಜಾಮನಿ ಗುಂಡಿನ ದಾಳಿ ನಡೆಸಿದ್ದ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಕೊಹ್ಲಿ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘಟನೆಯ ನಂತರ ಆರೋಪಿ ತಲೆಮರೆಸಿಕೊಂಡಿದ್ದನು. ಆದರೆ, ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಶನಿವಾರ ರಾತ್ರಿ ಹೈದರಾಬಾದ್‌ನ ಫತೇ ಚೌಕ್ ಪ್ರದೇಶದಲ್ಲಿ ಮುಖ್ಯ ಆರೋಪಿ ಸರ್ಫರಾಜ್ ನಿಜಾಮನಿ ಮತ್ತು ಆತನಿಗೆ ಸಹಕರಿಸಿದ ಜಾಫರುಲ್ಲಾ ಖಾನ್‌ನನ್ನು ಬಂಧಿಸಿದ್ದಾರೆ ಎಂದು ಬದಿನ್ ಎಸ್‌ಎಸ್‌ಪಿ ಕಮರ್ ರಜಾ ಜಸ್ಕಾನಿ ತಿಳಿಸಿದ್ದಾರೆ. ಮೃತ ರೈತನ ಸಹೋದರ ಪೂನ್ ಕುಮಾರ್ ಕೊಹ್ಲಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.
ಈ ಹತ್ಯೆಯನ್ನು ಖಂಡಿಸಿ ಸಿಂಧ್ ಪ್ರಾಂತ್ಯದಾದ್ಯಂತ ಹಿಂದು ಸಮುದಾಯ ಬೀದಿಗಿಳಿದು ಹೋರಾಟ ನಡೆಸಿತ್ತು. ಸಿಂಧ್‌ನಲ್ಲಿ ಹಿಂದು ಅಲ್ಪಸಂಖ್ಯಾತರ ಕಲ್ಯಾಣ ಟ್ರಸ್ಟ್ ನಡೆಸುತ್ತಿರುವ ಶಿವ ಕಾಚಿ ಮಾತನಾಡಿ, “ಸಮುದಾಯದ ನೂರಾರು ಜನರು ನಡೆಸಿದ ಶಾಂತಿಯುತ ಪ್ರತಿಭಟನೆ ಮತ್ತು ಸಾರ್ವಜನಿಕ ಒತ್ತಡದಿಂದಾಗಿ ಆರೋಪಿಯ ಬಂಧನ ಸಾಧ್ಯವಾಗಿದೆ. ಸಿಂಧ್ ಐಜಿಪಿ ಜಾವೇದ್ ಅಖ್ತರ್ ಓಧೋ ಅವರು ಸ್ವತಃ ಮೃತನ ತಂದೆಗೆ ಕರೆ ಮಾಡಿ ಬಂಧನದ ಮಾಹಿತಿ ನೀಡಿದ ಬಳಿಕವಷ್ಟೇ ಪ್ರತಿಭಟನೆಯನ್ನು ಹಿಂಪಡೆಯಲಾಯಿತು” ಎಂದು ಹೇಳಿದ್ದಾರೆ. ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲು ಮತ್ತು ಅಲ್ಪಸಂಖ್ಯಾತರ ವಿಶ್ವಾಸವನ್ನು ಮರುಸ್ಥಾಪಿಸಲು ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಅವರು ಆಗ್ರಹಿಸಿದ್ದಾರೆ.






