ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಕಾವೇರಿ ಕಾಲೇಜಿನಲ್ಲಿ ಹೊರರಾಜ್ಯದ ವಿದ್ಯಾರ್ಥಿಗಳ ವರ್ತನೆ ವಿರುದ್ಧ ಕನ್ನಡಪರ ಹೋರಾಟಗಾರರಾದ ರೂಪೇಶ್ ರಾಜಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲೇಜಿನಲ್ಲಿ ಮಲಯಾಳಿ ವಿದ್ಯಾರ್ಥಿಗಳು ದರ್ಪ ತೋರುತ್ತಿದ್ದಾರೆ ಮತ್ತು ಸ್ಥಳೀಯರಿಗೆ ಅಗೌರವ ತೋರುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (ಟ್ವಿಟರ್) ಈ ಕುರಿತು ಪೋಸ್ಟ್ ಮಾಡಿರುವ ಅವರು, “ಮೈಸೂರಿನ ಕಾವೇರಿ ಕಾಲೇಜಿನಲ್ಲಿ ಇಲ್ಲೂ ವಲಸಿಗರ ದರ್ಬಾರ್ ಶುರು ಆಯಿತಾ? ಇದೇನು ಶೋ ಅಪ್ ಮಾಡೋಕಾ ಬಂದಿರೋದಾ ಅಥವಾ ಇಲ್ಲಿ ನಾವು ಆಡಿದ್ದೇ ಆಟ ಅಂತಾನಾ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಹೊರಗಿನಿಂದ ಬಂದವರು ಯಾರಿಗೂ ಮರ್ಯಾದೆ ನೀಡದೆ, ತಾವು ಆಡಿದ್ದೇ ಆಟ ಎಂಬಂತೆ ವರ್ತಿಸುತ್ತಿದ್ದಾರೆ ಎಂಬ ದೂರುಗಳು ಬಂದಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಈ ವಿದ್ಯಮಾನಗಳು ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿರುವ ರೂಪೇಶ್ ರಾಜಣ್ಣ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಡಿಜಿಪಿ (@DgpKarnataka) ಹಾಗೂ ಮೈಸೂರು ಜಿಲ್ಲಾಧಿಕಾರಿಗಳಿಗೆ (@DCMysuru) ಟ್ಯಾಗ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಶಿಸ್ತು ಉಲ್ಲಂಘನೆ ಮತ್ತು ಸ್ಥಳೀಯರ ಮೇಲಿನ ದಬ್ಬಾಳಿಕೆ ಸಹಿಸಲು ಸಾಧ್ಯವಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.






