Home State Politics National More
STATE NEWS

Sirsiಯಲ್ಲಿ ನದಿ ಜೋಡಣೆ ವಿರುದ್ಧ ಜನಸಾಗರ; `ಪಶ್ಚಿಮ ಘಟ್ಟ’ ಉಳಿಸಿ ಎಂದು 25 ಸಾವಿರಕ್ಕೂ ಅಧಿಕ ಜನರಿಂದ ಸರ್ಕಾರಕ್ಕೆ ಎಚ್ಚರಿಕೆ!

Sirsi protest against bedti varada river linking project
Posted By: Sagaradventure
Updated on: Jan 11, 2026 | 3:02 PM

ಶಿರಸಿ: ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರಕ್ಕೆ ಮಾರಕವಾಗಲಿರುವ ಬೇಡ್ತಿ-ವರದಾ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಜನರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ರವಿವಾರ ಶಿರಸಿಯಲ್ಲಿ ನಡೆದ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಮಠಾಧೀಶರು, ಜನಪ್ರತಿನಿಧಿಗಳು ಸೇರಿದಂತೆ 25 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡು ಸರ್ಕಾರಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ಸೋಂದಾ ಸ್ವರ್ಣವಲ್ಲೀ‌ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ, ‘ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ’ ಈ ಐತಿಹಾಸಿಕ ಸಮಾವೇಶವನ್ನು ಆಯೋಜಿಸಿತ್ತು. ಸಮಾವೇಶದಲ್ಲಿ ಭಾಗವಹಿಸಿದ ವಿಜ್ಞಾನಿಗಳು ಮತ್ತು ನೀರಾವರಿ ತಜ್ಞರು, ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಪರಿಸರ ಧಾರಣ ಸಾಮರ್ಥ್ಯ ಮೀರಿದ್ದು, ಇಂತಹ ಅವೈಜ್ಞಾನಿಕ ನದಿ ತಿರುವು ಯೋಜನೆಗಳು ಪಶ್ಚಿಮ ಘಟ್ಟದ ಅವನತಿಗೆ ಕಾರಣವಾಗಲಿವೆ ಎಂದು ವರದಿ ನೀಡಿದ್ದಾರೆ.

ಸರ್ಕಾರಗಳಿಗೆ ಪ್ರಮುಖ ಒತ್ತಾಯಗಳು: ಸಮಾವೇಶದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮುಂದೆ ಹಲವು ಪ್ರಮುಖ ಬೇಡಿಕೆಗಳನ್ನು ಮಂಡಿಸಲಾಯಿತು:

  • ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆಗಳ ಡಿ.ಪಿ.ಆರ್ (ವಿಸ್ತೃತ ಯೋಜನಾ ವರದಿ) ತಯಾರಿಸಲು ರಾಜ್ಯ ಸರ್ಕಾರ ನೀಡಿರುವ ಒಪ್ಪಿಗೆಯನ್ನು ಕೂಡಲೇ ಹಿಂಪಡೆಯಬೇಕು.
  • ಶರಾವತಿ ಪಂಪ್ಡ್‌ ಸ್ಟೋರೇಜ್ ಸೇರಿದಂತೆ ಪಶ್ಚಿಮ ಘಟ್ಟದಲ್ಲಿ ಯಾವುದೇ ಬೃಹತ್ ಜಲ ವಿದ್ಯುತ್‌ ಯೋಜನೆಗಳನ್ನು ಜಾರಿಗೊಳಿಸಬಾರದು.
  • ನದಿ ತಿರುವು ಯೋಜನೆಗಳ ಸ್ಥಳ ಸಮೀಕ್ಷೆಗೆ ಅರಣ್ಯ ಇಲಾಖೆ ಅನುಮತಿ ನೀಡಬಾರದು.
  • ಮಾನವ ಹಕ್ಕುಗಳ ಮಾದರಿಯಲ್ಲೇ ನದಿಗಳಿಗೂ ‘ಜೀವಿಸುವ ಹಕ್ಕು’ (Right to Life) ಹಾಗೂ ನೈಸರ್ಗಿಕವಾಗಿ ಹರಿಯುವ ಹಕ್ಕನ್ನು ನೀಡುವ ಕಾನೂನು ಜಾರಿಗೆ ತರಬೇಕು.
  • ಬೃಹತ್ ಯೋಜನೆಗಳ ಬದಲಿಗೆ ಜನಸಹಭಾಗಿತ್ವದ ಕಿರು ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಬೇಕು.

ಮುಖ್ಯಮಂತ್ರಿಗಳು ಈ ಹಿಂದೆ ನೀಡಿದ ಭರವಸೆಯಂತೆ ತಜ್ಞರು ಮತ್ತು ಹೋರಾಟಗಾರರ ಸಭೆಯನ್ನು ಶೀಘ್ರವೇ ಕರೆಯಬೇಕು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗವು ಕೇಂದ್ರ ಸಚಿವರನ್ನು ಭೇಟಿ ಮಾಡಲು ದಿನಾಂಕ ನಿಗದಿಪಡಿಸಬೇಕು ಎಂದು ಸಮಾವೇಶ ಒತ್ತಾಯಿಸಿತು. ಅಹಿಂಸಾತ್ಮಕವಾಗಿ ‘ಪಶ್ಚಿಮ ಘಟ್ಟ ಉಳಿಸಿ’ ಚಳುವಳಿ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ದಿಗಂಬರ ಜೈನ ಮಠದ ಶ್ರೀಗಳು, ಜಡೆ ಶ್ರೀಗಳು, ಸಚಿವ ಮಂಕಾಳು ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Shorts Shorts