ನವದೆಹಲಿ: ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ‘ಗ್ರೋಕ್’ ಮೂಲಕ ಅ*ಶ್ಲೀಲ ಚಿತ್ರಗಳನ್ನು ರಚಿಸುತ್ತಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಚಾಟಿ ಬೀಸುತ್ತಿದ್ದಂತೆಯೇ ಎಲೋನ್ ಮಸ್ಕ್ ಒಡೆತನದ ‘ಎಕ್ಸ್’ (ಟ್ವಿಟರ್) ಎಚ್ಚೆತ್ತುಕೊಂಡಿದೆ. ಭಾರತದ ಆನ್‌ಲೈನ್ ಕಂಟೆಂಟ್ ಕಾನೂನುಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿರುವ ಸಂಸ್ಥೆ, ಬರೋಬ್ಬರಿ 3,500ಕ್ಕೂ ಹೆಚ್ಚು ಆಕ್ಷೇಪಾರ್ಹ ಕಂಟೆಂಟ್‌ಗಳನ್ನು ನಿರ್ಬಂಧಿಸಿದೆ ಮತ್ತು 600ಕ್ಕೂ ಹೆಚ್ಚು ಖಾತೆಗಳನ್ನು ಅಮಾನತುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಗ್ರೋಕ್ ಎಐ ಚಾಟ್‌ಬಾಟ್ ಬಳಸಿ ಲೈಂ*ಗಿಕವಾಗಿ ಅಸಭ್ಯವಾದ ಚಿತ್ರಗಳನ್ನು ರಚಿಸುತ್ತಿರುವ ಬಗ್ಗೆ ವರದಿಗಳು ಬಂದ ಹಿನ್ನೆಲೆಯಲ್ಲಿ, ಈ ಕುರಿತು ಕೈಗೊಂಡ ಕ್ರಮಗಳ ವರದಿ ನೀಡುವಂತೆ ಕೇಂದ್ರ ಸರ್ಕಾರವು ಎಕ್ಸ್ ಕಾರ್ಪ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಇದಾದ ಕೆಲವೇ ದಿನಗಳಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ. ಮೂಲಗಳ ಪ್ರಕಾರ, ಎಕ್ಸ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅ*ಶ್ಲೀಲ ಚಿತ್ರಗಳ ರಚನೆಯನ್ನು ತಡೆಯಲು ಮತ್ತು ಸರ್ಕಾರದ ನಿಯಮಗಳನ್ನು ಪಾಲಿಸಲು ಸಮ್ಮತಿಸಿದೆ.
ಜನವರಿ 2 ರಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಎಕ್ಸ್ ಸಂಸ್ಥೆಗೆ ಪತ್ರ ಬರೆದು, ಲೈಂ*ಗಿಕವಾಗಿ ಅಸಭ್ಯವಾದ ವಿಷಯಗಳನ್ನು ತಡೆಯುವಲ್ಲಿ ವಿಫಲವಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. “ದೇಶದ ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ” ಎಂದು ಅಧಿಕಾರಿಯೊಬ್ಬರು ಎಚ್ಚರಿಸಿದ್ದರು. ಅಲ್ಲದೆ, ಗ್ರೋಕ್ ಕೇವಲ ಪ್ಲಾಟ್‌ಫಾರ್ಮ್ ಅಲ್ಲ, ಅದೊಂದು ‘ಕೃತಕ ಕಂಟೆಂಟ್ ಕ್ರಿಯೇಟರ್’ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಮನುಷ್ಯರು ಹೇಗೆ ಕಂಟೆಂಟ್ ಸೃಷ್ಟಿಸುತ್ತಾರೋ, ಹಾಗೆಯೇ ಗ್ರೋಕ್ ಕೂಡ ಸೃಷ್ಟಿಸುತ್ತದೆ, ಹೀಗಾಗಿ ಕಾನೂನು ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಲಾಗಿತ್ತು.
ಆರಂಭದಲ್ಲಿ ಎಕ್ಸ್ ನೀಡಿದ್ದ ಪ್ರತಿಕ್ರಿಯೆಗೆ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿತ್ತು. ಕೇವಲ ಬಳಕೆದಾರರ ನೀತಿಯನ್ನೇ ಕಾಪಿ-ಪೇಸ್ಟ್ ಮಾಡಿ ಕಳುಹಿಸಲಾಗಿತ್ತು ಎನ್ನಲಾಗಿದೆ. ಆದರೆ ಈಗ ಎಕ್ಸ್ ಸಂಸ್ಥೆ ದಿಟ್ಟ ಕ್ರಮಕ್ಕೆ ಮುಂದಾಗಿದೆ. ಕೇವಲ ಭಾರತ ಮಾತ್ರವಲ್ಲದೆ, ಇಂಡೋನೇಷ್ಯಾ ಕೂಡ ಇತ್ತೀಚೆಗೆ ಇದೇ ಕಾರಣಕ್ಕಾಗಿ ಚಾಟ್‌ಬಾಟ್ ಅನ್ನು ಅಮಾನತುಗೊಳಿಸಿತ್ತು. ಜೊತೆಗೆ ಯುಕೆ, ಫ್ರಾನ್ಸ್ ಮತ್ತು ಮಲೇಷ್ಯಾ ದೇಶಗಳು ಕೂಡ ಎಐ ಮೂಲಕ ರಚಿಸಲಾಗುವ ಇಂತಹ ಕಂಟೆಂಟ್ ವಿರುದ್ಧ ಧ್ವನಿ ಎತ್ತಿವೆ.






