ಬೆಂಗಳೂರು: ರಸ್ತೆಯಲ್ಲಿ ಸಂಚಾರ ನಿಯಮ ಪಾಲಿಸುವುದನ್ನು ಬಿಟ್ಟು, ಸಾರ್ವಜನಿಕ ಸೇವೆಯಲ್ಲಿದ್ದ ಬಸ್ ಚಾಲಕನ ಮೇಲೆ ದರ್ಪ ತೋರಿದ್ದ ಯುವಕನನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ದೀಕ್ಷಿತ್ (Dixith) ಅಲಿಯಾಸ್ ಲಲ್ಲೂ ಎಂದು ಗುರುತಿಸಲಾಗಿದೆ.
ಏನಿದು ಘಟನೆ?
ಕಳೆದೆರಡು ದಿನಗಳ ಹಿಂದೆ ಕೆಎಸ್‌ಆರ್‌ಟಿಸಿ (KSRTC) ಬಸ್ ಕಲಾಸಿಪಾಳ್ಯದಿಂದ ಕೊಳ್ಳೆಗಾಲಕ್ಕೆ ಹೊರಟಿತ್ತು. ಬಸ್ ಸಾರಕ್ಕಿ ಸಿಗ್ನಲ್ ದಾಟಿ ಮುಂದೆ ಸಾಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ಯುವಕ ಬಸ್ ಓವರ್‌ಟೇಕ್ ಮಾಡಿ, ನನ್ನ ಬೈಕನ್ನೇ ಓವರ್‌ಟೇಕ್ ಮಾಡ್ತೀಯಾ?” ಎಂದು ಕೂಗಾಡುತ್ತಾ ಬಸ್ಸನ್ನು ಅಡ್ಡಗಟ್ಟಿ, ಚಾಲಕ ಆನಂದ್ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಆನಂದ್ ಅವರ ಮುಖಕ್ಕೆ ಬಲವಾಗಿ ಗುದ್ದಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಘಟನೆ ಸಂಭವಿಸಿದ ತಕ್ಷಣ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಸಿಟಿವಿ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಈಗ ಆರೋಪಿ ದೀಕ್ಷಿತ್‌ನನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ.






