ನವದೆಹಲಿ: ಸಿಬಿಐ ನಿರ್ದೇಶಕರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್ ಸೂದ್ (Praveen Sood) ಅವರ ವಿಸ್ತರಿತ ಸೇವಾ ಅವಧಿಯು 2026ರ ಮೇ ತಿಂಗಳಲ್ಲಿ ಮುಕ್ತಾಯವಾಗಲಿದೆ. ಕರ್ನಾಟಕದ ಮಾಜಿ ಡಿಜಿ-ಐಜಿಪಿ (DG-IGP)ಯಾಗಿದ್ದ ಸೂದ್, 2023ರಲ್ಲಿ ಸಿಬಿಐ ಚುಕ್ಕಾಣಿ ಹಿಡಿದಿದ್ದರು. ಈಗ ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಚರ್ಚೆ ಜೋರಾಗಿದೆ.
1986ರ ಬ್ಯಾಚ್‌ನ ಕರ್ನಾಟಕ ಕೆಡರ್ ಅಧಿಕಾರಿಯಾದ ಪ್ರವೀಣ್ ಸೂದ್ ಅವರನ್ನು 2023ರ ಮೇ 25 ರಂದು ಎರಡು ವರ್ಷಗಳ ಅವಧಿಗೆ ಸಿಬಿಐ ನಿರ್ದೇಶಕರಾಗಿ ನೇಮಿಸಲಾಗಿತ್ತು. ಅವರ ಉತ್ತಮ ಕಾರ್ಯಕ್ಷಮತೆಯನ್ನು ಗಮನಿಸಿ ಕೇಂದ್ರ ಸರ್ಕಾರವು ಅವರ ಅಧಿಕಾರಾವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಿತ್ತು. ಆ ವಿಸ್ತರಿತ ಅವಧಿಯು ಈಗ ಮುಕ್ತಾಯದ ಹಂತಕ್ಕೆ ಬಂದಿದೆ.
ಮುಂದಿನ ಸಿಬಿಐ ರೇಸ್‌ನಲ್ಲಿರುವವರು:
ಪ್ರವೀಣ್ ಸೂದ್ ಅವರ ಸ್ಥಾನಕ್ಕೆ ಪ್ರಮುಖವಾಗಿ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರು ಕೇಳಿಬರುತ್ತಿದೆ:
ಜಿ.ಪಿ. ಸಿಂಗ್ (G.P. Singh): 1991ರ ಬ್ಯಾಚ್‌ನ ಅಸ್ಸಾಂ-ಮೇಘಾಲಯ ಕೆಡರ್‌ನ ಅಧಿಕಾರಿ. ಇವರು ಪ್ರಸ್ತುತ ಅಸ್ಸಾಂ ಡಿಜಿಪಿಯಾಗಿದ್ದು, ಸಿಬಿಐ ನಿರ್ದೇಶಕ ಸ್ಥಾನಕ್ಕೆ ಪ್ರಬಲ ಅಭ್ಯರ್ಥಿ ಎಂದು ಪರಿಗಣಿಸಲಾಗಿದೆ.
ರಾಜೀವ್ ಶರ್ಮಾ (Rajeev Sharma): 1990ರ ಬ್ಯಾಚ್‌ನ ರಾಜಸ್ಥಾನ ಕೆಡರ್ ಅಧಿಕಾರಿ. ಪ್ರಸ್ತುತ ರಾಜಸ್ಥಾನದ ಡಿಜಿಪಿಯಾಗಿರುವ ಇವರ ಹೆಸರೂ ಸಹ ಪರಿಗಣನೆಯಲ್ಲಿದೆ. ಹಾಗೂ
ಇತರ ರಾಜ್ಯದ ಡಿಜಿ: ಮತ್ತೊಂದು ರಾಜ್ಯದಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಹಿರಿಯ ಡಿಜಿಪಿ ದರ್ಜೆಯ ಅಧಿಕಾರಿಯ ಹೆಸರೂ ಸಹ ರೇಸ್‌ನಲ್ಲಿದ್ದು, ಅಂತಿಮ ಕ್ಷಣದಲ್ಲಿ ಅಚ್ಚರಿಯ ಹೆಸರು ಹೊರಬರುವ ಸಾಧ್ಯತೆಯಿದೆ.






