ಬೆಳಗಾವಿ: ಕುಂದಾನಗರಿಯ ರಾಜಕೀಯದಲ್ಲಿ ಜಾರಕಿಹೊಳಿ ಮತ್ತು ಕತ್ತಿ ಕುಟುಂಬಗಳ ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ. ಹುಕ್ಕೇರಿ ತಾಲೂಕಿನಲ್ಲಿ ರಮೇಶ್ ಕತ್ತಿ ಅವರ ಪ್ರಭಾವಕ್ಕೆ ಬ್ರೇಕ್ ಹಾಕಲು ನಿರ್ಧರಿಸಿರುವ ಜಾರಕಿಹೊಳಿ ಸಹೋದರರು (Jarkiholi brothers), ಈಗ ಸಹಕಾರ ಕ್ಷೇತ್ರವನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ.
ಏನಿದು ಜಾರಕಿಹೊಳಿ ವರ್ಸಸ್ ಕತ್ತಿ ಸಮರ?
ಇತ್ತೀಚೆಗೆ ನಡೆದ ಡಿಸಿಸಿ ಬ್ಯಾಂಕ್(DCC Bank) ಚುನಾವಣೆಯಲ್ಲಿ ರಮೇಶ್ ಕತ್ತಿ (Ramesh Katti) ವಿರುದ್ಧ ಸೋಲನ್ನಪ್ಪಿದ್ದ ರಾಜೇಂದ್ರ ಪಾಟೀಲ ಅವರಿಗೆ ಈಗ ಜಾರಕಿಹೊಳಿ ಬ್ರದರ್ಸ್ ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಪಟ್ಟವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಕತ್ತಿ ಕೋಟೆಯೊಳಗೆ ಜಾರಕಿಹೊಳಿ ಬಣದ ಎಂಟ್ರಿಯಾಗಿದೆ.
ಕಳೆದ ಮೂರು ತಿಂಗಳಲ್ಲಿ ಈ ಎರಡು ಬಣಗಳ ನಡುವೆ ಮೂರು ಬಾರಿ ಸಂಘರ್ಷ ನಡೆದಿದೆ. ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ಜಾರಕಿಹೊಳಿ ಬಣದ 15 ಅಭ್ಯರ್ಥಿಗಳನ್ನು ಕತ್ತಿ ಮಣ್ಣುಮುಕ್ಕಿಸಿದ್ದರು. ಬಳಿಕ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ಕತ್ತಿ ಜಯಭೇರಿ ಬಾರಿಸಿದ್ದರು. ಆದರೆ ಈಗ ನಾಮನಿರ್ದೇಶನದ ಮೂಲಕ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಈ ಹಿಂದೆ ಲಕ್ಷ್ಮಣ ಸವದಿ ಅವರು ಅಪೇಕ್ಸ್ ಬ್ಯಾಂಕ್ ಪ್ರತಿನಿಧಿಯಾಗುವ ಕನಸನ್ನು ರಾಹುಲ್ ಜಾರಕಿಹೊಳಿ ಮೂಲಕ ಭಗ್ನಗೊಳಿಸಿದ್ದ ಬ್ರದರ್ಸ್, ಈಗ ರಮೇಶ್ ಕತ್ತಿ ಅವರ ಹುಕ್ಕೇರಿ ಸಾಮ್ರಾಜ್ಯದಲ್ಲಿ ತಮ್ಮ ಬಣದ ಪ್ರಭಾವ ಹೆಚ್ಚಿಸಲು ಮುಂದಾಗಿದ್ದಾರೆ.
ಜಾರಕಿಹೊಳಿ ಬ್ರದರ್ಸ್ ತಂತ್ರವೇನು?
ಹುಕ್ಕೇರಿ ಕ್ಷೇತ್ರದಲ್ಲಿ ರಮೇಶ್ ಕತ್ತಿ ಅವರ ಏಕಸ್ವಾಮ್ಯವನ್ನು ಮುರಿಯುವುದು ಮತ್ತು ಡಿಸಿಸಿ ಬ್ಯಾಂಕ್ ಬೋರ್ಡ್‌ನಲ್ಲಿ ತಮ್ಮ ಬೆಂಬಲಿಗರನ್ನು ಕೂರಿಸುವ ಮೂಲಕ ಸಹಕಾರ ಕ್ಷೇತ್ರದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವುದು ಜಾರಕಿಹೊಳಿ ಸಹೋದರರ ಪ್ಲಾನ್ ಆಗಿದೆ.






