ಬೆಂಗಳೂರು: ಡೇಟಿಂಗ್ ಆ್ಯಪ್‌ನಲ್ಲಿ ಸಿಕ್ಕ ಯುವತಿಯನ್ನು ನೈಜ ವ್ಯಕ್ತಿ ಎಂದು ನಂಬಿದ 26 ವರ್ಷದ ಯುವಕನೊಬ್ಬ ಈಗ ಸೈಬರ್ ವಂಚಕರ ಜಾಲಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾನೆ. ವಿಶೇಷವೆಂದರೆ, ಈ ವಂಚನೆಗೆ ಆರೋಪಿಗಳು AI (Artificial Intelligence) ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾರೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.
ಸಂತ್ರಸ್ತ ಯುವಕ ‘Happn’ ಎಂಬ ಡೇಟಿಂಗ್ ಆ್ಯಪ್‌ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ್ದ. ಅಲ್ಲಿ ಆತನಿಗೆ ‘ಇಶಾನಿ’ ಎಂಬ ಹೆಸರಿನಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಇಶಾನಿ ಎಂಬುದು ನಿಜವಾದ ವ್ಯಕ್ತಿಯಲ್ಲ, ಬದಲಾಗಿ AI ಮೂಲಕ ಸೃಷ್ಟಿಸಿದ ನಕಲಿ ಪ್ರೊಫೈಲ್ ಆಗಿತ್ತು.
ಮೊಬೈಲ್ ನಂಬರ್ ವಿನಿಮಯವಾದ ನಂತರ ಕೆಲದಿನಗಳ ಹಿಂದೆ ಇಶಾನಿ ಹೆಸರಿನಿಂದ ಯುವಕನಿಗೆ ವಿಡಿಯೋ ಕಾಲ್ ಬಂದಿತ್ತು. ಆ ಕರೆಯಲ್ಲಿ ಯುವತಿಯೂ ಬೆತ್ತಲಾಗಿದ್ದು, ಯುವಕನಿಗೂ ಬಟ್ಟೆ ಬಿಚ್ಚುವಂತೆ ಪ್ರಚೋದಿಸಿದ್ದಾಳೆ. ಯುವಕ ಆಕೆಯನ್ನು ನಂಬಿ ಬೆತ್ತಲಾಗುತ್ತಿದ್ದಂತೆ, ಹಂತಕರು ಆ ದೃಶ್ಯವನ್ನು ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದಾರೆ.
ರೆಕಾರ್ಡ್ ಮಾಡಿದ ಬೆತ್ತಲೆ ವಿಡಿಯೋವನ್ನು ಯುವಕನಿಗೆ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಲು ಶುರುಮಾಡಿದ ವಂಚಕರು, ಹಂತ ಹಂತವಾಗಿ ಸುಮಾರು 1.53 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ.
ಯುವಕನಿಂದ ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಾಗ ಅತ, ಕೇಂದ್ರ ಸೆನ್ (CEN) ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ, ವಂಚಕರು ಅಪ್ಲಿಕೇಶನ್ ಬಳಸಿ AI ಯುವತಿಯ ವಿಡಿಯೋ ಸೃಷ್ಟಿಸಿ ಈ ಕೃತ್ಯ ಎಸಗಿರುವುದು ಬಯಲಾಗಿದೆ.






