ಬೀದರ್ : ಬೆಂಗಳೂರಿನ ಮೈಕೋ ಲೇಔಟ್ ಟ್ರಾಫಿಕ್ ಪೊಲೀಸ್ (Mico Layout Traffic Police) ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಚೇಂದ್ರ (Machendra) ಎಂಬುವವರ ವಿರುದ್ಧ ಅವರ ಪತ್ನಿ ಸೀನಾ (Seena) ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪತಿ ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆಗಾಗಿ ತನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
2022ರಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ ಈ ದಂಪತಿ ಆರಂಭದಲ್ಲಿ ಸುಖವಾಗಿದ್ದರು. ಆದರೆ, ಇತ್ತೀಚೆಗೆ ಪತಿ ಮಚೇಂದ್ರ ವರದಕ್ಷಿಣೆಗಾಗಿ (Dowry)ಪೀಡಿಸಲು ಶುರು ಮಾಡಿದ್ದಾನೆ. ಹಣ ನೀಡದಿದ್ದರೆ ಅಕ್ಕನ ಮಗಳನ್ನೇ ಮದುವೆಯಾಗುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಪತ್ನಿಯನ್ನ ತವರು ಮನೆಗೆ ಬಿಟ್ಟು 15 ತಿಂಗಳಾದರೂ ವಾಪಸ್ ಕರೆದೊಯ್ಯದ ಮಚೇಂದ್ರ, ಫೋನ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾನೆ. ಅಷ್ಟೇ ಅಲ್ಲದೆ, ಜೀವ ಬೆದರಿಕೆಯನ್ನೂ ಒಡ್ಡಿದ್ದಾನೆ ಎನ್ನಲಾಗಿದೆ.
ಈಗಾಗಲೇ ಮಗಳ ಮದುವೆಗಾಗಿ 26 ಲಕ್ಷ ರೂಪಾಯಿ ಖರ್ಚು ಮಾಡಿ ಪೋಷಕರು ಸಾಲದ ಸುಳಿಯಲ್ಲಿದ್ದಾರೆ. ಈಗ ಮತ್ತೆ ಹಣ ತರುವಂತೆ ಪೀಡಿಸುತ್ತಿರುವುದು ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ.
ತನ್ನ ಪತಿ ಪೊಲೀಸ್ ಆಗಿರುವುದರಿಂದಲೇ ಆತನ ವಿರುದ್ಧ ಕ್ರಮ ಕೈಗೊಳ್ಳಲು ಇಲಾಖೆ ಹಿಂದೇಟು ಹಾಕುತ್ತಿದೆ. ಈಗಾಗಲೇ ಚಿಂತಾಕಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದರೂ ಮತ್ತು ಮೈಕೋ ಲೇಔಟ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.






