Home State Politics National More
STATE NEWS

AI ಸವಾಲು: ಭಾರತದ ಔದ್ಯೋಗಿಕ ರಂಗಕ್ಕೆ ಬದಲಾವಣೆಗೆ ಒಗ್ಗಿಕೊಳ್ಳುವ ಅಗ್ನಿಪರೀಕ್ಷೆ

AI
Posted By: Rashmi Yadav
Updated on: Jan 12, 2026 | 11:33 AM

ಎಐ(Artificial Intelligence) ಇಂದು ಜಗತ್ತನ್ನೇ ಆಳುತ್ತಿದೆ. ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ AI ಕಾಲಿಡದ ಕ್ಷೇತ್ರವಿಲ್ಲ ಎಂದೇ ಹೇಳಬಹುದು. ನಮ್ಮ ದೇಶವು ಜಾಗತಿಕ ಮಟ್ಟದಲ್ಲಿ ಮುನ್ನುಗ್ಗಬೇಕೆಂದರೆ ಆರ್ಥಿಕ, ಸಾಮಾಜಿಕ, ಔದ್ಯೋಗಿಕ ರಂಗದಲ್ಲಿ ಪಾರಮ್ಯ ಸಾಧಿಸುವುದರ ಜೊತೆಗೆ ಎಐಯನ್ನೂ ಸರಿಯಾಗಿ ಅರ್ಥೈಸಿಕೊಂಡು, ಅದಕ್ಕೆ ತಕ್ಕನಾಗಿ ಮುಂದುವರಿಯಬೇಕಾಗಿದೆ. ಜಾಗತಿಕ ಸ್ಪರ್ಧಾತ್ಮಕ ಯುಗದಲ್ಲಿ ನಾವು ಕೃತಕ ಬುದ್ಧಿಮತ್ತೆಯನ್ನು (AI) ಎಷ್ಟು ವೇಗವಾಗಿ ಅಳವಡಿಸಿಕೊಳ್ಳುತ್ತೇವೆ ಎನ್ನುವುದರ ಮೇಲಲ್ಲ, ಬದಲಿಗೆ ನಮ್ಮ ಉದ್ಯೋಗಿಗಳು ಈ ಬದಲಾವಣೆಗೆ ಎಷ್ಟು ವೇಗವಾಗಿ ಹೊಂದಿಕೊಳ್ಳುತ್ತಾರೆ ಎನ್ನುವುದರ ಮೇಲೆ ನಿರ್ಧಾರವಾಗಲಿದೆ

ಭಾರತದಲ್ಲಿ ಪ್ರತಿ ವರ್ಷ 15 ಲಕ್ಷಕ್ಕೂ ಹೆಚ್ಚು ಇಂಜಿನಿಯರಿಂಗ್ ಪದವೀಧರರು ಹೊರಬರುತ್ತಿದ್ದಾರೆ. ಆದರೆ ಉದ್ಯೋಗ ರಂಗದಲ್ಲಿ ನಡೆಸಿದ ಸಮೀಕ್ಷೆಗಳ ಪ್ರಕಾರ, ಎಐ, ಸೈಬರ್ ಸೆಕ್ಯೂರಿಟಿ ಅಥವಾ ಕ್ಲೌಡ್ ಕಂಪ್ಯೂಟಿಂಗ್‌ನಂತಹ ಆಧುನಿಕ ಡಿಜಿಟಲ್ ಕ್ಷೇತ್ರಗಳಲ್ಲಿ ತಕ್ಷಣವೇ ಕೆಲಸ ಮಾಡಲು ಅರ್ಧದಷ್ಟು ಅಭ್ಯರ್ಥಿಗಳಿಗೂ ಅರ್ಹತೆ ಇಲ್ಲ. ಹಿಂದೆ ಪದವಿಗಳು ಜೀವಮಾನದ ಆಸ್ತಿಯಾಗಿದ್ದವು, ಆದರೆ ಇಂದಿನ ವೇಗದ ಯುಗದಲ್ಲಿ ಪದವಿಯ ಪ್ರಸ್ತುತತೆ ಕೇವಲ 2-3 ವರ್ಷಗಳಿಗೆ ಮಾತ್ರ ಸೀಮಿತವಾಗಿದೆ. ಜಾಗತಿಕವಾಗಿ, ಎಐ ಸಂಬಂಧಿತ ಉದ್ಯೋಗಗಳಿಗೆ ಬೇಕಾದ ಕೌಶಲ್ಯಗಳು ಸಾಮಾನ್ಯ ಉದ್ಯೋಗಗಳಿಗಿಂತ 66% ರಷ್ಟು ವೇಗವಾಗಿ ಬದಲಾಗುತ್ತಿವೆ. ನಮ್ಮ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆ ಮತ್ತು ಕಂಪನಿಗಳ ನೇಮಕಾತಿ ಪ್ರಕ್ರಿಯೆಗಳು ಈ ವೇಗಕ್ಕೆ ತಕ್ಕಂತೆ ಸ್ಪಂದಿಸಲು ಹೆಣಗಾಡುತ್ತಿವೆ.

ವ್ಯವಸ್ಥೆ ನಿಧಾನವಾಗಿದ್ದರೂ, ಭಾರತದ ಯುವ ಉದ್ಯೋಗಿಗಳು ಎಚ್ಚೆತ್ತುಕೊಂಡಿದ್ದಾರೆ. ಕೋರ್ಸೆರಾ (Coursera), ಸ್ವಯಂ (SWAYAM) ನಂತಹ ಆನ್‌ಲೈನ್ ವೇದಿಕೆಗಳ ಮೂಲಕ ಹೊಸ ಕೌಶಲ್ಯಗಳನ್ನು ಕಲಿಯುವವರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ. ಉದ್ಯೋಗಿಗಳು ಕೇವಲ ಕೆಲಸ ಕಳೆದುಕೊಳ್ಳುವ ಭಯದಿಂದಲ್ಲ, ಬದಲಿಗೆ ವೃತ್ತಿಜೀವನದ ಏಳಿಗೆಗಾಗಿ ತಾವಾಗಿಯೇ ಕಲಿಯುತ್ತಿದ್ದಾರೆ. ಹಾಗಾಗಿ, ಭಾರತದಲ್ಲಿ ಸದ್ದಿಲ್ಲದೇ ‘ಕಲಿಕಾ ಕ್ರಾಂತಿ’ ನಡೆಯುತ್ತಿದೆ.

ವಿಶ್ವ ಆರ್ಥಿಕ ವೇದಿಕೆಯ(WEF) ‘ಫ್ಯೂಚರ್ ಆಫ್ ಜಾಬ್ಸ್- 2025’ ವರದಿಯ ಪ್ರಕಾರ, 2030ರ ವೇಳೆಗೆ ಭಾರತದ ಪ್ರಮುಖ ಉದ್ಯೋಗಗಳಿಗೆ ಅಗತ್ಯವಿರುವ 44-46% ರಷ್ಟು ಕೌಶಲ್ಯಗಳು ಸಂಪೂರ್ಣವಾಗಿ ಬದಲಾಗಲಿವೆ. ಅಂದರೆ, ಇಂದು ನಾವು ಕಲಿಯುತ್ತಿರುವ ಅರ್ಧದಷ್ಟು ವಿಷಯಗಳು ಮುಂದಿನ 4 ವರ್ಷಗಳಲ್ಲಿ ನಿಷ್ಪ್ರಯೋಜಕವಾಗಬಹುದು.

 ಕೇವಲ ಕಾಲೇಜು ಪದವಿಗಳನ್ನು (Degrees) ನಂಬಿ ಕೂರುವ ಬದಲು, ವ್ಯಕ್ತಿಯೊಬ್ಬರು ಗಳಿಸಿದ ಎಲ್ಲಾ ಕೌಶಲ್ಯಗಳನ್ನು ಒಂದೇ ಕಡೆ ದಾಖಲಿಸುವ ವ್ಯವಸ್ಥೆ ಬರಬೇಕಿದೆ. ಇದು ಡಿಜಿಲಾಕರ್ (DigiLocker) ಮಾದರಿಯಲ್ಲಿರಬೇಕು. ವಿಶ್ವವಿದ್ಯಾಲಯದ ಶಿಕ್ಷಣ, ಆನ್‌ಲೈನ್ ಕೋರ್ಸ್, ಅಥವಾ ಕೆಲಸದ ಅನುಭವದ ಮೂಲಕ ಗಳಿಸಿದ ಕೌಶಲ್ಯಗಳ ದೃಢೀಕೃತ ದಾಖಲೆ ಇದಾಗಿರಬೇಕು. ಉದ್ಯೋಗದಾತರು ಅಭ್ಯರ್ಥಿಯ ಪದವಿಯ ಬದಲು ಅವರ ‘ನೈಜ ಸಾಮರ್ಥ್ಯ’ವನ್ನು ಗುರುತಿಸಲು ಇದು ಸಹಕಾರಿಯಾಗಲಿದೆ. ಅನೇಕ ಉದ್ಯೋಗಿಗಳು ಸ್ವ-ಕಲಿಕೆಯ (Self-learning) ಮೂಲಕ ಅತ್ಯಾಧುನಿಕ ಕೌಶಲ್ಯಗಳನ್ನು ಗಳಿಸಿಕೊಂಡಿರುತ್ತಾರೆ. ಆದರೆ, ಯಾವುದೇ ಅಧಿಕೃತ ಪ್ರಮಾಣಪತ್ರ ಅಥವಾ ಸಾಂಪ್ರದಾಯಿಕ ಡಿಗ್ರಿ ಇಲ್ಲದ ಕಾರಣ, ಈ ಕೌಶಲ್ಯಗಳು ಉದ್ಯೋಗದಾತರ ಕಣ್ಣಿಗೆ ಬೀಳದೆಯೇ ಹೋಗುತ್ತಿವೆ. ಇದನ್ನು ಸರಿಪಡಿಸದಿದ್ದರೆ ಉತ್ಪಾದಕತೆಯ ಮೇಲೆ ದೊಡ್ಡ ಹೊಡೆತ ಬೀಳಲಿದೆ.

2010 ಭಾರತದ ಡಿಜಿಟಲ್ ಮೂಲಸೌಕರ್ಯದ (UPI, Aadhaar) ದಶಕವಾಗಿತ್ತು. ಆದರೆ 2030ರ ಕಾಲಘಟ್ಟ ಭಾರತೀಯರು ಎಷ್ಟು ವೇಗವಾಗಿ ಕಲಿಯುತ್ತಾರೆ, ಹಳೆಯದನ್ನು ಮರೆಯುತ್ತಾರೆ (Unlearn) ಮತ್ತು ಹೊಸ ಅವಕಾಶಗಳು ಹಾಗೂ ಕಲಿಕೆಗಳಿಗೆ ತೆರೆದುಕೊಳ್ಳುತ್ತಾರೆ ಎಂಬುದರ ಮೇಲೆ ನಿರ್ಧಾರವಾಗಲಿದೆ. ಭಾರತದಲ್ಲಿ ಪ್ರತಿಭೆಗೆ ಕೊರತೆಯಿಲ್ಲ, ಆದರೆ ಆ ಪ್ರತಿಭೆಯನ್ನು ಸರಿಯಾಗಿ ಗುರುತಿಸಿ, ಬಳಸಿಕೊಳ್ಳುವ ವ್ಯವಸ್ಥೆಯ ಅಗತ್ಯವಿದೆ. 

 

Shorts Shorts