ಗದಗ: ಅಡಿಪಾಯ ತೋಡುವಾಗ ಸಿಕ್ಕ 65 ಲಕ್ಷ ಮೌಲ್ಯದ ಚಿನ್ನವನ್ನು (Gold) ಸರ್ಕಾರಕ್ಕೆ ಒಪ್ಪಿಸಿ ಮಾದರಿಯಾಗಿದ್ದ ಲಕ್ಕುಂಡಿಯ (Lakkundi) ರಿತ್ತಿ ಕುಟುಂಬ, ಈಗ ಅದೇ ಚಿನ್ನದ ವಿಚಾರವಾಗಿ ಸಂಕಷ್ಟಕ್ಕೆ ಸಿಲುಕಿದೆ. ಪುರಾತತ್ವ ಇಲಾಖೆಯ ಅಧಿಕಾರಿಗಳು ನೀಡಿದ ಒಂದು ಹೇಳಿಕೆ ಇಡೀ ಪ್ರಕರಣವನ್ನು ಗೊಂದಲದ ಗೂಡಾಗಿಸಿದೆ.
ಏನಿದು ‘ಬಿಂದಿಗೆ’ ವಿವಾದ?
ರಿತ್ತಿ ಕುಟುಂಬದವರು (Ritti Family)ಮನೆ ಕಟ್ಟಲು ಗುದ್ದಲಿ ಪೂಜೆ ಮಾಡಿ ಅಡಿಪಾಯ ತೋಡುವಾಗ ಸುಮಾರು 470 ಗ್ರಾಂ ತೂಕದ ಚಿನ್ನಾಭರಣಗಳಿದ್ದ ಬಿಂದಿಗೆ ಸಿಕ್ಕಿತ್ತು. ತಡಮಾಡದೆ ಅವರು ಇದನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಪುರಾತತ್ವ ಇಲಾಖೆಯ ಅಧಿಕಾರಿ ರಮೇಶ್ ಮೂಲಿಮನಿ, “ಇದು ಪುರಾತನ ನಿಧಿಯಲ್ಲ, ಬದಲಾಗಿ ಅಡುಗೆ ಮನೆಯಲ್ಲಿ ಹೂತಿಟ್ಟಿದ್ದ ಕುಟುಂಬದ ಪೂರ್ವಜರ ಆಸ್ತಿಯಾಗಿರಬಹುದು” ಎಂದು ಹೇಳಿದ್ದಾರೆ. ಹಳೆಯ ಕಾಲದಲ್ಲಿ ಚಿನ್ನ ರಕ್ಷಿಸಲು ಒಲೆಯ ಪಕ್ಕ ಹೂತಿಡುವ ಪದ್ಧತಿ ಇತ್ತು ಎಂಬುದು ಅವರ ವಾದ.
ಅಧಿಕಾರಿಗಳ ಈ ಹೇಳಿಕೆಯೇ ಈಗ ಕುಟುಂಬಕ್ಕೆ ಮುಳುವಾಗಿದೆ. ಇದು ನಮ್ಮ ಪೂರ್ವಜರ ಚಿನ್ನವೇ ಆಗಿದ್ದರೆ, ಸರ್ಕಾರ ನಮಗೆ ಅದನ್ನು ವಾಪಸ್ ನೀಡಲಿ ಎಂದು ಕುಟುಂಬದ ಸದಸ್ಯರಾದ ಗಂಗವ್ವ ಮತ್ತು ಗಿರಿಜಮ್ಮ ಕಣ್ಣೀರಿಡುತ್ತಿದ್ದಾರೆ.
ಒಂದು ಕಡೆ ಚಿನ್ನ ಸರ್ಕಾರದ ವಶದಲ್ಲಿದೆ, ಮತ್ತೊಂದು ಕಡೆ ಮಹಜರು ನೆಪದಲ್ಲಿ ಮನೆ ಕಾಮಗಾರಿ ನಿಲ್ಲಿಸಲಾಗಿದೆ. ಸಾಲ ಮಾಡಿ ಮನೆ ಕಟ್ಟಲು ಮುಂದಾಗಿದ್ದ ಈ ಬಡ ಕುಟುಂಬ ಈಗ ಇತ್ತ ಚಿನ್ನವೂ ಇಲ್ಲದೆ, ಅತ್ತ ಸರಿಯಾದ ಸೂರ ಇಲ್ಲದೆ ಬೀದಿ ಪಾಲಾಗುವ ಸ್ಥಿತಿಯಲ್ಲಿದೆ.
ಗ್ರಾಮಸ್ಥರ ಕಿಡಿ:
ಪರಿಶೀಲನೆ ನಡೆಸದೆ ಹಗುರವಾದ ಹೇಳಿಕೆ ನೀಡಿದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ದಿನ ಕಳೆದರೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಸರಿಯಲ್ಲ. ಈ ಪ್ರಾಮಾಣಿಕ ಕುಟುಂಬಕ್ಕೆ ಉದ್ಯೋಗ ಮತ್ತು ಮನೆ ನೀಡಬೇಕು ಇಲ್ಲವೇ ಅವರ ಚಿನ್ನ ಅವರಿಗೆ ನೀಡಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯರು ಆಗ್ರಹಿಸಿದ್ದಾರೆ.






