ಹಾಸನ: ಹಾಸನ ನಗರದ ಆಡವಳ್ಳಿಯಲ್ಲಿ ವಾಸವಿದ್ದ ರಾಧಾ (40) ಎಂಬುವವರ ಶವ ಯಗಚಿ ನದಿಯಲ್ಲಿ (Yagachi River) ಪತ್ತೆಯಾಗುವ ಮೂಲಕ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿಯ ಶೀಲದ ಮೇಲೆ ಶಂಕಿಸಿದ ಪತಿ ಕುಮಾರ್ ಎಂಬಾತನೇ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ.
ಘಟನೆಯ ವಿವರ :
ಮೃತ ರಾಧಾ ಮತ್ತು ಪತಿ ಕುಮಾರ್ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಪತ್ನಿ ತನ್ನ ಮಗನೊಂದಿಗೆ ಹಾಸನದ ಆಡವಳ್ಳಿಯಲ್ಲಿ ನೆಲೆಸಿದ್ದರು.
ಇದೇ ವೇಳೆ ರಾಧಾ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸುತ್ತಿದ್ದ ಕುಮಾರ್, ಆಗಾಗ ಈ ವಿಷಯವಾಗಿ ಜಗಳ ತೆಗೆಯುತ್ತಿದ್ದನು. ಕಳೆದ ಎರಡು ದಿನಗಳ ಹಿಂದೆ ಇದೇ ವಿಚಾರವಾಗಿ ಗಲಾಟೆ ನಡೆದಾಗ, ಹೆಂಡತಿ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಹೊಡೆತದ ತೀವ್ರತೆಗೆ ರಾಧಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಕೃತ್ಯದ ಬಳಿಕ ಪ್ರಕರಣವನ್ನು ಮುಚ್ಚಿ ಹಾಕಲು ಸಂಚು ರೂಪಿಸಿದ ಕುಮಾರ್, ರಾಧಾಳ ಶವವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಹೋಗಿ ಯಗಚಿ ನದಿಗೆ ಎಸೆದಿದ್ದಾನೆ.
ಕೊಲೆ ನಡೆದು ಎರಡು ದಿನಗಳ ನಂತರ, ಯಗಚಿ ನದಿಯಲ್ಲಿ ತೇಲುತ್ತಿದ್ದ ಶವವನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






