ಮೈಸೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಅವರು ಗೂಡ್ಲೂರಿಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಮಾರ್ಗಮಧ್ಯೆ ಸೌಹಾರ್ದಯುತ ಭೇಟಿಯಷ್ಟೇ ನಡೆದಿದೆ, ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ಮತ್ತು ಸರ್ಕಾರದ ಹಲವು ಪ್ರಮುಖ ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತು ಗೊಂದಲಗಳಿವೆ ಎಂಬ ವರದಿಗಳನ್ನು ಸಿಎಂ ತಳ್ಳಿಹಾಕಿದರು. ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ, ಇದೆಲ್ಲವೂ ಮಾಧ್ಯಮಗಳ ಸೃಷ್ಟಿ. ಶಾಸಕರಿಗೆ ಈ ಒಳ ವಿಚಾರಗಳು ತಿಳಿದಿರುವುದಿಲ್ಲ, ಹೀಗಾಗಿ ಅವರ ಹೇಳಿಕೆಗಳನ್ನು ಪರಿಗಣಿಸಬಾರದು. ಈ ಬಗ್ಗೆ ಏನಿದ್ದರೂ ನಾನು ಅಥವಾ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಬೇಕು. ಅಂತಿಮವಾಗಿ ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ, ಎಂದು ಅವರು ಖಡಕ್ ಆಗಿ ನುಡಿದರು.
ಇದೇ ವೇಳೆ ರಾಜ್ಯ ಬಜೆಟ್ ಮತ್ತು ಸರ್ಕಾರದ ಮೈಲಿಗಲ್ಲುಗಳ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, ಬಹುತೇಕ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ರಾಜ್ಯ ಬಜೆಟ್ ಮಂಡಿಸಲಾಗುವುದು. ಅಲ್ಲದೆ, ನಾನು ಮುಖ್ಯಮಂತ್ರಿಯಾಗಿ 1000 ದಿನಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಫೆಬ್ರವರಿ 13ರಂದು ಹಾವೇರಿಯಲ್ಲಿ ಬೃಹತ್ ‘ಸಾಧನಾ ಸಮಾವೇಶ’ ನಡೆಸಲು ಚಿಂತನೆ ನಡೆಸಲಾಗಿದೆ, ಎಂದು ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಎದುರಿಸಲು ಸರ್ಕಾರ ಸರ್ವಸನ್ನದ್ಧವಾಗಿದೆ ಎಂದ ಸಿಎಂ, ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಪಾಲಿಕೆ ಚುನಾವಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣಕ್ಕೆ ಮರಳುವ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ವ್ಯಂಗ್ಯವಾಗಿ ಉತ್ತರಿಸಿದ ಸಿದ್ದರಾಮಯ್ಯ, ಅವರೀಗ ಆರೋಗ್ಯವಾಗಿದ್ದಾರೆ ಮತ್ತು ಕ್ರಿಯಾಶೀಲರಾಗಿದ್ದಾರೆ. ಅವರ ವರ್ತನೆ ಮತ್ತು ಹಾವಭಾವಗಳನ್ನು ಮಾಧ್ಯಮದವರೇ ಗಮನಿಸಬೇಕು, ನಾವಲ್ಲ, ಎಂದು ಪ್ರತಿಕ್ರಿಯಿಸಿದರು.






