ಈರೋಡ್: ಮಾನವ ಮತ್ತು ವನ್ಯಜೀವಿಗಳ ಸಂಘರ್ಷಕ್ಕೆ ಮತ್ತೊಂದು ಮುಗ್ಧ ಜೀವ ಬಲಿಯಾಗಿದೆ. ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ (STR) ಆಹಾರ ಅರಸಿ ಬಂದ ಎರಡು ವರ್ಷದ ಹೆಣ್ಣು ಆನೆ ಮರಿಯೊಂದು, ಆಹಾರವೆಂದು ಭಾವಿಸಿ ನಾಡಬಾಂಬ್ (Country-made bomb) ಕಚ್ಚಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ರೈತನೊಬ್ಬನನ್ನು ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆ ಗುತಿಯಾಲತ್ತೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಆನೆ ಮರಿಯ ಕಳೇಬರ ಪತ್ತೆಯಾಗಿತ್ತು. ಕೂಡಲೇ ಸ್ಥಳಕ್ಕೆ ಅರಣ್ಯ ಇಲಾಖೆಯ ಪಶುವೈದ್ಯರನ್ನು ಕರೆಸಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಆನೆ ಮರಿಯ ಸೊಂಡಿಲು ಮತ್ತು ಬಾಯಿಯ ಭಾಗದಲ್ಲಿ ತೀವ್ರವಾಗಿ ರಕ್ತಸ್ರಾವವಾಗಿ ಗಾಯಗಳಾಗಿರುವುದು ಕಂಡುಬಂದಿದೆ.
ಮರಣೋತ್ತರ ಪರೀಕ್ಷೆಯ ಬಳಿಕ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಆನೆ ಮರಿ ನಾಡಬಾಂಬ್ ನುಂಗಿದ ಪರಿಣಾಮ ಬಾಯಿಯಲ್ಲೇ ಅದು ಸ್ಫೋಟಗೊಂಡು ಸಾವನ್ನಪ್ಪಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಕಾಡುಪ್ರಾಣಿಗಳನ್ನು ಬೇಟೆಯಾಡಲು ಅಥವಾ ಆನೆಗಳು ಕೃಷಿ ಜಮೀನಿಗೆ ನುಗ್ಗದಂತೆ ತಡೆಯಲು ದುಷ್ಕರ್ಮಿಗಳು ಹಣ್ಣು ಅಥವಾ ಆಹಾರ ಪದಾರ್ಥಗಳ ನಡುವೆ ಈ ಸ್ಫೋಟಕಗಳನ್ನು ಇಟ್ಟಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದರು.
ಘಟನೆಯ ಬಗ್ಗೆ ತೀವ್ರ ತನಿಖೆ ನಡೆಸಿದ ಅರಣ್ಯಾಧಿಕಾರಿಗಳು, ಈ ಕೃತ್ಯದಲ್ಲಿ ಭಾಗಿಯಾದ ಆರೋಪದ ಮೇಲೆ ಸ್ಥಳೀಯ ರೈತ ಕಾಳಿಮುತ್ತು (43) ಎಂಬುವವನನ್ನು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತ ಆನೆ ಮರಿಯನ್ನು ಅರಣ್ಯ ಪ್ರದೇಶದಲ್ಲೇ ಅಂತ್ಯಸಂಸ್ಕಾರ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.






