ಕುಮಟಾ(ಉತ್ತರಕನ್ನಡ): ಮೋಜು ಮಸ್ತಿಗಾಗಿ ಕಡಲ ತೀರಕ್ಕೆ ಬಂದಿದ್ದ ಪ್ರವಾಸಿಗರ ಪ್ರವಾಸ ದುರಂತದಲ್ಲಿ ಅಂತ್ಯವಾಗುವ ಸನ್ನಿವೇಶವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ತಾಲ್ಲೂಕಿನ ಪ್ರಸಿದ್ಧ ಗೋಕರ್ಣ ಮುಖ್ಯ ಕಡಲತೀರದಲ್ಲಿ ಈಜಾಡುತ್ತಿದ್ದಾಗ ಸಮುದ್ರದ ಸುಳಿಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಇಬ್ಬರು ಯುವಕರನ್ನು ಜೀವರಕ್ಷಕ ಸಿಬ್ಬಂದಿ (Lifeguards) ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸುಮಾರು 10 ಜನ ಸ್ನೇಹಿತರ ತಂಡ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿತ್ತು. ಮಂಗಳವಾರ ಬೆಳಿಗ್ಗೆ ಸುಮಾರು 10:50ರ ಸುಮಾರಿಗೆ ಇವರು ಸಮುದ್ರದಲ್ಲಿ ಈಜಾಡುತ್ತಿದ್ದರು. ಈ ವೇಳೆ ಬೀದರ್ ಮೂಲದ ಸಂಗಮೇಶ್ ರಾಜಪ್ಪ ಪಾಟೀಲ್(23) ಮತ್ತು ಗುಲ್ಬರ್ಗ ಜಿಲ್ಲೆಯ ವಾಡಿ ತಾಲೂಕಿನ ಜಯಪ್ರಕಾಶ್(23) ಎಂಬುವವರು ಆಳದ ಸುಳಿಗೆ ಸಿಲುಕಿದ್ದಾರೆ. ಅಲೆಗಳ ಅಬ್ಬರಕ್ಕೆ ದಡ ಸೇರಲಾಗದೇ ನೀರಿನಲ್ಲಿ ಮುಳುಗುತ್ತಿದ್ದ ಇವರನ್ನು ಗಮನಿಸಿದ ಕಡಲ ತೀರದ ಸಿಬ್ಬಂದಿ ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಕರ್ತವ್ಯನಿರತ ಜೀವ ರಕ್ಷಕ ಸಿಬ್ಬಂದಿಗಳಾದ ರೋಷನ್ ಖಾರ್ವಿ, ಶಿವಪ್ರಸಾದ್ ಅಂಬಿಗ, ಮೋಹನ್ ಅಂಬಿಗ ಮತ್ತು ಲೋಕೇಶ್ ಹರಿಕಂತ್ರ ಅವರು ತಕ್ಷಣ ನೀರಿಗೆ ಧುಮುಕಿ ಇಬ್ಬರೂ ಪ್ರವಾಸಿಗರನ್ನು ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಗೆ ಬೀಚ್ ಸೂಪರ್‌ವೈಸರ್ ರವಿ ನಾಯ್ಕ್, ಪ್ರವಾಸಿಮಿತ್ರ ಸಿಬ್ಬಂದಿಗಳಾದ ಶೇಖರ್ ಹರಿಕಂತ್ರ ಮತ್ತು ಗಜೇಂದ್ರ ಗೌಡ ಸಾಥ್ ನೀಡಿದ್ದಾರೆ.
ರಕ್ಷಣಾ ಕಾರ್ಯದಲ್ಲಿ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಗಳಾದ ಜಗ್ಗು ಹರಿಕಂತ್ರ, ಮಹೇಶ್ ಹರಿಕಂತ್ರ, ಕಮಲಾಕರ ಹೊಸಕಟ್ಟ, ಸಚಿನ್ ಹರಿಕಂತ್ರ, ಮಹಾಬಲೇಶ್ವರ ಹರಿಕಂತ್ರ ಹಾಗೂ ಗೃಹ ರಕ್ಷಕ ಸಿಬ್ಬಂದಿ ಗಜಾನನ್ ನಾಗೇಕರ್ ಅವರು ಸಹಕರಿಸಿದ್ದಾರೆ. ಸಕಾಲಕ್ಕೆ ಸ್ಪಂದಿಸಿದ ಸಿಬ್ಬಂದಿ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ಮತ್ತು ರಕ್ಷಿಸಲ್ಪಟ್ಟ ಪ್ರವಾಸಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.






