ಬೆಂಗಳೂರು: ರಾಜ್ಯದ ವಕೀಲರ ಸಮುದಾಯ ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಕರ್ನಾಟಕ ರಾಜ್ಯ ವಕೀಲರ ಪರಿಷತ್ (KSBC) ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಪರಿಷತ್‌ನ 23 ನೂತನ ಪದಾಧಿಕಾರಿಗಳ ಆಯ್ಕೆಗಾಗಿ 2026ರ ಮಾರ್ಚ್ 11 ರಂದು ಚುನಾವಣೆ ನಡೆಯಲಿದ್ದು, ಚುನಾವಣಾ ಅಧಿಕಾರಿಯಾಗಿರುವ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಅವರು ಭಾನುವಾರ (ಜ.5) ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ. ಇದರೊಂದಿಗೆ ವಕೀಲರ ವಲಯದಲ್ಲಿ ಚುನಾವಣಾ ಚಟುವಟಿಕೆಗಳು ಗರಿಗೇರಿವೆ.
ಮಾರ್ಚ್ 11ರ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ರಾಜ್ಯಾದ್ಯಂತ ವಕೀಲರಿಗಾಗಿ ಒಟ್ಟು 194 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಬೆಂಗಳೂರಿನ ವಕೀಲರು ಸಿಟಿ ಸಿವಿಲ್ ಕೋರ್ಟ್ ಸಂಕೀರ್ಣದಲ್ಲಿ ತಮ್ಮ ಹಕ್ಕು ಚಲಾಯಿಸಬಹುದಾಗಿದೆ. ಕೆಎಸ್‌ಬಿಸಿ ಒಟ್ಟು 25 ಸದಸ್ಯ ಬಲವನ್ನು ಹೊಂದಿದ್ದು, ಇದರಲ್ಲಿ ವಕೀಲರ ವರ್ಗದಿಂದ 18 ಮತ್ತು ಮಹಿಳಾ ಕೋಟಾದಡಿ 7 ಸದಸ್ಯರು ಆಯ್ಕೆಯಾಗಲಿದ್ದಾರೆ. ಉಳಿದ ಇಬ್ಬರು ಸದಸ್ಯರನ್ನು ಭಾರತೀಯ ವಕೀಲರ ಪರಿಷತ್ (BCI) ನಾಮನಿರ್ದೇಶನ ಮಾಡಲಿದೆ. ಆಸಕ್ತ ಅಭ್ಯರ್ಥಿಗಳು ಬೆಂಗಳೂರಿನ ಕೆಎಸ್‌ಬಿಸಿ ಕಚೇರಿಯಲ್ಲಿ ನಾಮಪತ್ರ ಪಡೆಯಬಹುದಾಗಿದ್ದು, 2026ರ ಫೆಬ್ರವರಿ 10 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ದೇಶಾದ್ಯಂತ ಒಟ್ಟು ಐದು ಹಂತಗಳಲ್ಲಿ ಬಾರ್ ಕೌನ್ಸಿಲ್ ಚುನಾವಣೆ ನಡೆಯುತ್ತಿದ್ದು, ಕರ್ನಾಟಕವು ಮೂರನೇ ಹಂತದ ಪಟ್ಟಿಯಲ್ಲಿದೆ. ರಾಜಸ್ಥಾನ, ಪಶ್ಚಿಮ ಬಂಗಾಳ, ಜಾರ್ಖಂಡ್, ಗುಜರಾತ್, ಪಂಜಾಬ್ ಮತ್ತು ಹರಿಯಾಣಗಳ ಜೊತೆಗೆ ಕರ್ನಾಟಕದಲ್ಲೂ ಮಾರ್ಚ್ 15, 2026ರ ಒಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂಬ ಸುಪ್ರೀಂ ಆದೇಶದಂತೆ ಈ ದಿನಾಂಕ ನಿಗದಿಪಡಿಸಲಾಗಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಉನ್ನತ ಅಧಿಕಾರ ಸಮಿತಿಗಳ ನೇರ ಮೇಲ್ವಿಚಾರಣೆಯಲ್ಲಿ ಮತ ಎಣಿಕೆ ನಡೆಯಲಿದೆ. ಪ್ರಾದೇಶಿಕ ಸಮಿತಿಯ ನಿರ್ಧಾರಗಳ ಬಗ್ಗೆ ಯಾವುದೇ ಆಕ್ಷೇಪವಿದ್ದರೆ ರಾಷ್ಟ್ರೀಯ ಉನ್ನತ ಅಧಿಕಾರದ ಮೇಲ್ವಿಚಾರಣಾ ಸಮಿತಿಯನ್ನು ಸಂಪರ್ಕಿಸಬಹುದು ಮತ್ತು ಅದರ ತೀರ್ಮಾನವೇ ಅಂತಿಮವಾಗಿರುತ್ತದೆ. ಚುನಾವಣೆಗೆ ಸಂಬಂಧಿಸಿದ ತಕರಾರು ಅರ್ಜಿಗಳನ್ನು ಯಾವುದೇ ಸಿವಿಲ್ ನ್ಯಾಯಾಲಯಗಳು ಅಥವಾ ಹೈಕೋರ್ಟ್‌ಗಳು ಸ್ವೀಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.






