ಬೆಂಗಳೂರು: ದೂರದ ಪ್ರಯಾಣ ಮಾಡುವಾಗ ಸಿಗುವ ಅಪರಿಚಿತರ ಸ್ನೇಹ ಮತ್ತು ಅವರು ನೀಡುವ ಆಹಾರ ಪದಾರ್ಥಗಳು ನಿಮ್ಮ ಪ್ರಾಣಕ್ಕೆ ಸಂಚಕಾರ ತರಬಹುದು. ರೈಲಿನಲ್ಲಿ ಪ್ರಯಾಣಿಕರಿಗೆ ಅಮಲು ಪದಾರ್ಥ ಬೆರೆಸಿದ ಚಹಾ (Tea) ಕುಡಿಸಿ ಹಣ ಮತ್ತು ಚಿನ್ನಾಭರಣ ಲೂಟಿ ಮಾಡುತ್ತಿದ್ದ ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ:
ಬಿಹಾರ ಮೂಲದ ಕೃಷ್ಣಕುಮಾರ್ ಎಂಬುವವರು ಕಳೆದ ಎರಡನೇ ತಾರೀಖಿನಂದು ಬೆಂಗಳೂರಿನಿಂದ ದಾನಾಪುರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಪರಿಚಯವಾದ ಸಫರ್ ಮತ್ತು ಸತರ್ಮ್ ಎಂಬಿಬ್ಬರು, ನಾವು ಕೂಡ ಬಿಹಾರದವರೇ ಎಂದು ಹೇಳಿ ತುಂಬಾ ಆಪ್ತರಾಗಿದ್ದರು.
ರೈಲು ಮಾರ್ಗಮಧ್ಯೆ ನಿಲ್ದಾಣವೊಂದರಲ್ಲಿ ನಿಂತಾಗ, ಈ ಅಸಾಮಿಗಳು ಟೀ ತಂದುಕೊಟ್ಟಿದ್ದರು. ಆ ಚಹಾದಲ್ಲಿ ಪ್ರಜ್ಞೆ ತಪ್ಪಿಸುವ ಮದ್ದನ್ನು ಬೆರೆಸಲಾಗಿತ್ತು. ಕೃಷ್ಣಕುಮಾರ್ ಅವರಿಗೆ ಅನುಮಾನ ಬರಬಾರದೆಂದು ಆರೋಪಿಗಳು ಕೂಡ ಟೀ ಕುಡಿಯುವಂತೆ ನಾಟಕವಾಡಿದ್ದರು.
ಟೀ ಕುಡಿದ ಕೆಲವೇ ಕ್ಷಣಗಳಲ್ಲಿ ಕೃಷ್ಣಕುಮಾರ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ಸಂದರ್ಭವನ್ನು ಬಳಸಿಕೊಂಡ ಆರೋಪಿಗಳು ಕೃಷ್ಣಕುಮಾರ್ ಅವರ ಬಳಿಯಿದ್ದ ಚಿನ್ನದ ಸರ, 4,000 ರೂಪಾಯಿ ನಗದು ಮತ್ತು ಬ್ಯಾಗ್ ಸಮೇತ ಪರಾರಿಯಾಗಿದ್ದರು.
ಬೈಯಪ್ಪನಹಳ್ಳಿ ರೈಲ್ವೆ ಠಾಣೆಯಲ್ಲಿ (Baiyappanahalli Railway Police) ಕೇಸ್ ದಾಖಲಾದ ನಂತರ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಇದೇ ಗ್ಯಾಂಗ್ ಮತ್ತೊಬ್ಬ ಪ್ರಯಾಣಿಕನನ್ನು ಗುರಿಯಾಗಿಸಿಕೊಂಡು ಲೂಟಿ ಮಾಡಲು ಹೊಂಚು ಹಾಕುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಇಬ್ಬರನ್ನೂ ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.






