ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ, ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ಕಲಿಸಬೇಕಾದ ಶಿಕ್ಷಕರೇ ಅಕ್ರಮದ ಹಾದಿ ಹಿಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. SSLC ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ತಮ್ಮ ಶಾಲೆ ಮತ್ತು ಸಂಬಂಧಿಕರ ಮಕ್ಕಳಿಗೆ ಉತ್ತಮ ಫಲಿತಾಂಶ ಕೊಡಿಸುವ ಭರಾಟೆಯಲ್ಲಿ ಪ್ರಶ್ನೆಪತ್ರಿಕೆ ಲೀಕ್ ಮಾಡಿದ ಆರು ಮಂದಿ ಶಿಕ್ಷಕರು ಈಗ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಂಧಿತ ಆರೋಪಿಗಳಲ್ಲಿ ತುಮಕೂರಿನ ಅನುದಾನಿತ ಪ್ರೌಢಶಾಲೆಯ ಮುಖ್ಯಶಿಕ್ಷಕ ವಿ.ಡಿ.ಗಿರೀಶ್, ರಾಮನಗರದ ಅಮ್ಜದ್ ಖಾನ್ ಸೇರಿದಂತೆ ಕಲಬುರಗಿಯ ಶಹೀದಾ ಬೇಗಂ, ಮೊಹಮ್ಮದ್ ಸಿರಾಜುದ್ದೀನ್, ಫಹಮೀದಾ ಮತ್ತು ಫರ್ಜಾನಾ ಬೇಗಂ ಸೇರಿದ್ದಾರೆ. ಈ ಶಿಕ್ಷಕರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಿಂದ ಮುಖ್ಯಶಿಕ್ಷಕರಿಗೆ ನೀಡಲಾಗುವ ಒಟಿಪಿ (OTP) ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಪರೀಕ್ಷೆಯ ದಿನ ಬೆಳಿಗ್ಗೆ 6:30ರ ಸುಮಾರಿಗೆ ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡಿ, ಅದರ ಫೋಟೋಗಳನ್ನು ತಮ್ಮ ಆಪ್ತ ವಿದ್ಯಾರ್ಥಿಗಳಿಗೆ ರವಾನಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಶಿಕ್ಷಕರಷ್ಟೇ ಅಲ್ಲದೆ ವಿದ್ಯಾರ್ಥಿಗಳ ಪಾತ್ರವೂ ರೋಚಕವಾಗಿದೆ. ಶಿಕ್ಷಕರಿಂದ ಪ್ರಶ್ನೆಪತ್ರಿಕೆ ಪಡೆದ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ “ಡೆಲ್ಟಾ ಹ್ಯಾಕರ್ 32” ಮತ್ತು “ಡೆಲ್ಟಾ ಹ್ಯಾಕರ್” ಎಂಬ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಖಾತೆಗಳನ್ನು ತೆರೆದಿದ್ದಾರೆ. ಅಲ್ಲಿ ಲೀಕ್ ಆದ ಪ್ರಶ್ನೆಪತ್ರಿಕೆಗಳನ್ನು ಕೇವಲ 50 ರಿಂದ 200 ರೂಪಾಯಿಗೆ ಮಾರಾಟ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿ, ಪ್ರಶ್ನೆಪತ್ರಿಕೆಯಲ್ಲಿದ್ದ ವಿಶಿಷ್ಟ ‘ಅಲ್ಫಾನ್ಯೂಮೆರಿಕ್ ಕೋಡ್’ (Alphanumeric Code) ಜಾಡು ಹಿಡಿದು ಮೂಲ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯ್ವಾಗಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತ ಶಿಕ್ಷಕರು ಹಣದಾಸೆಗಾಗಿ ಈ ಕೃತ್ಯ ಎಸಗಿಲ್ಲ ಎಂಬುದು ತಿಳಿದುಬಂದಿದೆ. ಕೇವಲ ತಮ್ಮ ಶಾಲೆಯ ಹಾಗೂ ಸಂಬಂಧಿಕರ ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಬೇಕೆಂಬ ಕುರುಡು ಪ್ರೇಮದಿಂದ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.






