ವಾಷಿಂಗ್ಟನ್: ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಮೇಲಿನ ದಮನಕಾರಿ ನೀತಿ ಮತ್ತು ಹಿಂಸಾಚಾರವನ್ನು ವಿರೋಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇರಾನ್ ಜೊತೆಗೆ ವಾಣಿಜ್ಯ ವ್ಯವಹಾರ ನಡೆಸುವ ಯಾವುದೇ ದೇಶದ ಮೇಲೂ ಶೇ. 25ರಷ್ಟು ಹೆಚ್ಚುವರಿ ಸುಂಕ (Tariff) ವಿಧಿಸುವುದಾಗಿ ಟ್ರಂಪ್ ಸೋಮವಾರ ಘೋಷಿಸಿದ್ದು, ಜಾಗತಿಕ ವಾಣಿಜ್ಯ ವಲಯದಲ್ಲಿ ಸಂಚಲನ ಮೂಡಿಸಿದೆ.
ತಮ್ಮ ಸಾಮಾಜಿಕ ಜಾಲತಾಣ ‘ಟ್ರುತ್ ಸೋಶಿಯಲ್’ನಲ್ಲಿ ಈ ಬಗ್ಗೆ ಆದೇಶ ಹೊರಡಿಸಿರುವ ಟ್ರಂಪ್, “ತಕ್ಷಣದಿಂದಲೇ ಜಾರಿಗೆ ಬರುವಂತೆ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಜೊತೆ ವ್ಯವಹಾರ ನಡೆಸುವ ಯಾವುದೇ ದೇಶವು ಅಮೆರಿಕದೊಂದಿಗೆ ಮಾಡುವ ಎಲ್ಲಾ ವಹಿವಾಟುಗಳ ಮೇಲೆ ಶೇ.25ರಷ್ಟು ಸುಂಕ ಪಾವತಿಸಬೇಕಾಗುತ್ತದೆ. ಈ ಆದೇಶ ಅಂತಿಮ ಮತ್ತು ನಿರ್ಣಾಯಕ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಟ್ರೇಡಿಂಗ್ ಎಕನಾಮಿಕ್ಸ್ ವರದಿಯ ಪ್ರಕಾರ, ಚೀನಾ, ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮತ್ತು ಇರಾಕ್ ದೇಶಗಳು ಇರಾನ್‌ನ ಪ್ರಮುಖ ವ್ಯಾಪಾರ ಪಾಲುದಾರರಾಗಿದ್ದು, ಟ್ರಂಪ್ ಅವರ ಈ ನಿರ್ಧಾರ ಈ ದೇಶಗಳಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದೆ.
ಕೇವಲ ಆರ್ಥಿಕ ನಿರ್ಬಂಧ ಮಾತ್ರವಲ್ಲದೆ, ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆಯ ಸುಳಿವನ್ನು ಕೂಡ ಶ್ವೇತಭವನ ನೀಡಿದೆ. “ವೈಮಾನಿಕ ದಾಳಿಗಳು ಕೂಡ ನಮ್ಮ ಮುಂದಿರುವ ಅನೇಕ ಆಯ್ಕೆಗಳಲ್ಲಿ ಒಂದಾಗಿದೆ” ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಹೇಳಿದ್ದಾರೆ. ಇದೇ ವೇಳೆ, ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರೊಂದಿಗೆ ಇರಾನ್ ರಾಜತಾಂತ್ರಿಕ ಮಾತುಕತೆಗೂ ಅವಕಾಶ ಹೊಂದಿದ್ದು, ಸಾರ್ವಜನಿಕ ಹೇಳಿಕೆಗಳಿಗಿಂತ ಭಿನ್ನವಾಗಿ ಖಾಸಗಿ ಮಾತುಕತೆಯಲ್ಲಿ ಇರಾನ್ ಮೃದು ಧೋರಣೆ ತೋರುತ್ತಿದೆ ಎಂದು ಅವರು ತಿಳಿಸಿದ್ದಾರೆ.






