ಬೆಂಗಳೂರು: ಸ್ಯಾಂಡಲ್ ವುಡ್ ನ ಇಬ್ಬರು ದಿಗ್ಗಜ ನಟರಾದ ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ನಡುವಿನ ಬಹುದಿನಗಳ ಶೀತಲ ಸಮರಕ್ಕೆ ಇದೀಗ ಅಧಿಕೃತವಾಗಿ ತೆರೆ ಬಿದ್ದಂತಾಗಿದೆ. ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟೀಸರ್ ಅನ್ನು ಕಿಚ್ಚ ಸುದೀಪ್ ಮೆಚ್ಚಿ ಕೊಂಡಾಡಿದ್ದು, ಇದಕ್ಕೆ ಪ್ರತಿಯಾಗಿ ಯಶ್ ಅವರು ‘ಸರ್’ ಎಂದು ಸಂಬೋಧಿಸುವ ಮೂಲಕ ಹಳೆಯ ವಿವಾದಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ. ಈ ಬೆಳವಣಿಗೆ ಇಬ್ಬರು ನಟರ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ.
ಇತ್ತೀಚೆಗೆ ಬಿಡುಗಡೆಯಾದ ‘ಟಾಕ್ಸಿಕ್’ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಸುದೀಪ್, “ಅಲೆಗಳ ವಿರುದ್ಧ ಈಜಲು ಸಮಯ ಬೇಕಾಗುತ್ತದೆ, ನಿಮ್ಮ ಗುರಿಯತ್ತ ನೀವು ದಿಟ್ಟ ಹೆಜ್ಜೆ ಇಟ್ಟಿದ್ದೀರಿ, ಶುಭವಾಗಲಿ” ಎಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಾರೈಸಿದ್ದರು. ಈ ಟ್ವೀಟ್‌ಗೆ ಅತ್ಯಂತ ಗೌರವಯುತವಾಗಿ ಪ್ರತಿಕ್ರಿಯಿಸಿರುವ ಯಶ್, “ಧನ್ಯವಾದಗಳು ಸರ್.. ಏಕಾಗ್ರತೆ ಕಳೆದುಕೊಳ್ಳದೆ, ಪ್ರಾಮಾಣಿಕವಾಗಿ ಮತ್ತು ಧೈರ್ಯದಿಂದ ಕೆಲಸ ಮಾಡುವುದನ್ನು ನಾನು ನಿಮ್ಮಂತಹ ಹಿರಿಯರಿಂದಲೇ ಕಲಿತಿದ್ದೇನೆ” ಎಂದು ಹೇಳುವ ಮೂಲಕ ಸುದೀಪ್ ಅವರಿಗೆ ಹಿರಿಯ ಸ್ಥಾನದ ಗೌರವ ನೀಡಿದ್ದಾರೆ.
ಅಂದಹಾಗೆ, ಈ ‘ಸರ್’ ವಿವಾದ ಹುಟ್ಟಿಕೊಂಡಿದ್ದು ಬರೋಬ್ಬರಿ 7 ವರ್ಷಗಳ ಹಿಂದೆ. 2018ರಲ್ಲಿ ಕೇಂದ್ರ ಸಚಿವರು ಆರಂಭಿಸಿದ್ದ ಫಿಟ್‌ನೆಸ್ ಚಾಲೆಂಜ್ ಅಭಿಯಾನದ ವೇಳೆ, ಸುದೀಪ್ ಅವರು ಯಶ್‌ಗೆ ಚಾಲೆಂಜ್ ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿ ವಿಡಿಯೋ ಮಾಡಿದ್ದ ಯಶ್, ಮಾತನಾಡುವ ಭರದಲ್ಲಿ “ಹಾಯ್ ಸುದೀಪ್” ಎಂದು ಸಂಬೋಧಿಸಿದ್ದರು. ವಯಸ್ಸಿನಲ್ಲಿ ಹಾಗೂ ಅನುಭವದಲ್ಲಿ ಹಿರಿಯರಾದ ಸುದೀಪ್ ಅವರಿಗೆ ಯಶ್ ಏಕವಚನ ಬಳಸಿದರು ಮತ್ತು ‘ಸರ್’ ಎಂದು ಕರೆಯಲಿಲ್ಲ ಎಂದು ಕಿಚ್ಚನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಅಂದು ನಡೆದ ಘಟನೆಯನ್ನು ಸ್ವತಃ ಸುದೀಪ್ ಗಂಭೀರವಾಗಿ ಪರಿಗಣಿಸದಿದ್ದರೂ, ಅಭಿಮಾನಿಗಳ ನಡುವೆ ಈ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದೀಗ ಯಶ್ ಬಹಿರಂಗವಾಗಿಯೇ ಸುದೀಪ್ ಅವರನ್ನು ‘ಸರ್’ ಹಾಗೂ ‘ಹಿರಿಯರು’ ಎಂದು ಕರೆಯುವ ಮೂಲಕ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿದ್ದಾರೆ. ಕನ್ನಡ ಚಿತ್ರರಂಗದ ಇಬ್ಬರು ಸೂಪರ್ ಸ್ಟಾರ್‌ಗಳ ಈ ಸ್ನೇಹಪರ ನಡೆಗೆ ಮತ್ತು ಪರಸ್ಪರ ಗೌರವಕ್ಕೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.






