ಕಾರವಾರ(ಉತ್ತರಕನ್ನಡ): ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ‘ಪಾರ್ಟ್ ಟೈಂ ಜಾಬ್’ ಮಾಡಿ ಕೈತುಂಬಾ ಹಣ ಗಳಿಸಬಹುದು ಎಂಬ ಆನ್‌ಲೈನ್ ಜಾಹೀರಾತನ್ನು ನಂಬಿದ ಮುಂಡಗೋಡ ತಾಲೂಕಿನ ಮಳಗಿ ಮೂಲದ ಯುವಕರೊಬ್ಬರು ಬರೋಬ್ಬರಿ 1.57 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ. ಈ ಸಂಬಂಧ ಕಾರವಾರದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಂಡಗೋಡ ತಾಲೂಕಿನ ಮಳಗಿಯ ಅಕ್ಷಯ ಸುರೇಶ ರೇವಣಕರ (33) ಎಂಬ ಖಾಸಗಿ ಉದ್ಯೋಗಿಯೇ ವಂಚನೆಗೊಳಗಾದವರು. ಡಿಸೆಂಬರ್ 30, 2025 ರಂದು ಇವರು ಟೆಲಿಗ್ರಾಮ್ ಬಳಸುತ್ತಿದ್ದಾಗ ‘ನಿಶಾ ಮೆಹ್ತಾ’ (Nisha Mehta) ಎಂಬ ಐಡಿಯಿಂದ ಆನ್‌ಲೈನ್ ಜಾಬ್ ಕುರಿತ ಜಾಹೀರಾತು ಬಂದಿದೆ. ಅದನ್ನು ಕ್ಲಿಕ್ ಮಾಡಿದಾಗ ‘ಟಾಸ್ಕ್ 3 ಬಜಾಜ್ ವಿಐಪಿ’ ಎಂಬ ಗ್ರೂಪ್‌ಗೆ ಸೇರ್ಪಡೆಗೊಂಡಿದ್ದಾರೆ. ಆ ಗ್ರೂಪಿನ ಅಡ್ಮಿನ್ ಆಗಿದ್ದ ‘ಸುರೇಶ ಮಲ್ಹೋತ್ರಾ’ ಎಂಬಾತ, ಕಂಪನಿಯ ಉತ್ಪನ್ನಗಳಿಗೆ ರೇಟಿಂಗ್ ಮತ್ತು ರಿವ್ಯೂ (Rating & Review) ನೀಡಿದರೆ ಹಣ ನೀಡುವುದಾಗಿ ನಂಬಿಸಿದ್ದಾನೆ.
ಆರಂಭದಲ್ಲಿ ವಿಶ್ವಾಸಗಳಿಸಲು ವಂಚಕರು ಅಕ್ಷಯ ಅವರ ಖಾತೆಗೆ 500 ರೂ. ಲಾಭಾಂಶ ಜಮಾ ಮಾಡಿದ್ದಾರೆ. ನಂತರ 700 ರೂ. ಹೂಡಿಕೆ ಮಾಡಿಸಿ, ಕೆಲಸ ಮುಗಿಸಿದ ನಂತರ 920 ರೂ. ವಾಪಸ್ ನೀಡಿದ್ದಾರೆ. ಹೀಗೆ ಹಂತ ಹಂತವಾಗಿ ನಂಬಿಕೆ ಬೆಳೆಸಿದ ವಂಚಕರು, ಹೆಚ್ಚಿನ ಹಣ ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಲಾಭ ಸಿಗುತ್ತದೆ ಎಂದು ಆಸೆ ತೋರಿಸಿದ್ದಾರೆ. ಇದನ್ನು ನಂಬಿದ ಅಕ್ಷಯ ಅವರು ಜನವರಿ 1 ಮತ್ತು 2 ರಂದು ಹಂತ ಹಂತವಾಗಿ ಬರೋಬ್ಬರಿ 1,57,800 ರೂಪಾಯಿ ಹಣವನ್ನು ವಂಚಕರು ಸೂಚಿಸಿದ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ಹಣ ಪಡೆದ ನಂತರ ಆರೋಪಿಗಳು ಲಾಭಾಂಶವನ್ನೂ ನೀಡದೆ, ಅಸಲನ್ನೂ ಹಿಂದಿರುಗಿಸದೆ ವಂಚಿಸಿದ್ದಾರೆ. ತಾವು ಮೋಸ ಹೋಗಿರುವುದು ಅರಿವಿಗೆ ಬರುತ್ತಿದ್ದಂತೆಯೇ ಅಕ್ಷಯ ಅವರು ಕಾರವಾರದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಬಿಎನ್‌ಎಸ್ (BNS) ಕಾಯ್ದೆಯಡಿ ತನಿಖೆ ಕೈಗೊಂಡಿದ್ದಾರೆ.






