Home State Politics National More
STATE NEWS

ಬೆಚ್ಚಿಬೀಳಿಸುವ ಹೈಟೆಕ್ Cyber ವಂಚನೆ ಬಯಲು: ‘ನ್ಯೂ ಸಿಸ್ಟಮ್’ App ಮೂಲಕ ಕೋಟ್ಯಂತರ ರೂ. ಲೂಟಿ!

Posted By: Sagaradventure
Updated: Jan 14, 2026 | 9:19 AM

ಬೆಂಗಳೂರು: ನೀವೆಂದೂ ಕಂಡು ಕೇಳರಿಯದ ಅತಿದೊಡ್ಡ ಸೈಬರ್ ವಂಚನೆ ಜಾಲವೊಂದನ್ನು ಭೇದಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಹೂಡಿಕೆಯ ಹೆಸರಲ್ಲಿ ಆಮಿಷವೊಡ್ಡಿ ಸಾರ್ವಜನಿಕರಿಗೆ ಬರೋಬ್ಬರಿ 3 ಕೋಟಿ 20 ಲಕ್ಷ ರೂ. ವಂಚಿಸಿದ್ದ ‘ನ್ಯೂ ಸಿಸ್ಟಮ್’ (New System) ಹೆಸರಿನ ನಕಲಿ ಕಂಪನಿಯ ಗ್ಯಾಂಗ್ ಇದೀಗ ಖಾಕಿ ಬಲೆಗೆ ಬಿದ್ದಿದೆ. ಹುಳಿಮಾವು ಪೊಲೀಸರು ನಡೆಸಿದ ಚುರುಕಿನ ಕಾರ್ಯಾಚರಣೆಯಲ್ಲಿ ಒಟ್ಟು 11 ಆರೋಪಿಗಳನ್ನು ಬಂಧಿಸಲಾಗಿದೆ.

​ಏನಿದು ‘ನ್ಯೂ ಸಿಸ್ಟಮ್’ ವಂಚನೆ?

ಆರೋಪಿಗಳು ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳಲ್ಲಿ ಲಿಂಕ್‌ಗಳನ್ನು ಶೇರ್ ಮಾಡುವ ಮೂಲಕ ಅಮಾಯಕರಿಗೆ ಗಾಳ ಹಾಕುತ್ತಿದ್ದರು. ‘ನ್ಯೂ ಸಿಸ್ಟಮ್’ ಎಂಬ ಆಪ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸುತ್ತಿದ್ದರು. ಇದನ್ನು ನಂಬಿ ಜನರು ಹಣ ಹೂಡಿಕೆ ಮಾಡಿದ ಕೂಡಲೇ, ಆ ಹಣವನ್ನು ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಳ್ಳಲಾಗುತ್ತಿತ್ತು. ಹೂಡಿಕೆದಾರರು ಲಾಭ ಅಥವಾ ಅಸಲು ಹಣವನ್ನು ವಿತ್‌ಡ್ರಾ ಮಾಡಲು ಹೋದಾಗ, ಅದು ಸಾಧ್ಯವಾಗದೇ ಹೋದಾಗಲೇ ತಾವು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ.

​ದುಬೈ ಲಿಂಕ್ ಮತ್ತು 4,500 ನಕಲಿ ಖಾತೆಗಳು!

ಈ ಜಾಲದ ಆಳ ಅಗಲ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಈ ವಂಚನೆಗಾಗಿ ಆರೋಪಿಗಳು ಬರೋಬ್ಬರಿ 4,500 ನಕಲಿ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡಿದ್ದಾರೆ. ಈ ಹಗರಣದ ‘ಮಾಸ್ಟರ್ ಮೈಂಡ್’ ಪ್ರೇಮ್ ನತನೈಜಾ ಎನ್ನುವವನು ದುಬೈನಲ್ಲಿ ಕುಳಿತುಕೊಂಡೇ ದೇಶದ ನಾನಾ ಭಾಗದ ಜನರಿಗೆ ವಂಚಿಸುತ್ತಿದ್ದನು ಎಂಬ ಸ್ಫೋಟಕ ಮಾಹಿತಿ ತನಿಖೆಯಲ್ಲಿ ಬಯಲಾಗಿದೆ. ಸದ್ಯ ಪ್ರಮುಖ ಆರೋಪಿಯ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.

​ಭರ್ಜರಿ ಜಪ್ತಿ: ರೋಲೆಕ್ಸ್ ವಾಚ್, ಕೆಜಿಗಟ್ಟಲೆ ಚಿನ್ನ!

ಬಂಧಿತ 11 ಆರೋಪಿಗಳಿಂದ ಪೊಲೀಸರು ಕೋಟ್ಯಂತರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇವುಗಳಲ್ಲಿ 242 ಡೆಬಿಟ್ ಕಾರ್ಡ್‌ಗಳು, 58 ಮೊಬೈಲ್ ಫೋನ್‌ಗಳು, 7 ಲ್ಯಾಪ್‌ಟಾಪ್‌ಗಳು, 530 ಗ್ರಾಂ ಚಿನ್ನ ಹಾಗೂ 21 ಬಾಕ್ಸ್ ತುಂಬಾ ಬ್ಯಾಂಕ್ ಪಾಸ್‌ಬುಕ್‌ಗಳು ಸೇರಿವೆ. ಅಷ್ಟೇ ಅಲ್ಲದೆ, ವಂಚಿಸಿದ ಹಣದಲ್ಲಿ ಖರೀದಿಸಿದ್ದ 9 ಐಷಾರಾಮಿ ರೋಲೆಕ್ಸ್ ಮತ್ತು ರ್ಯಾಡೋ ವಾಚ್‌ಗಳು ಹಾಗೂ 20 ಲಕ್ಷ ಮೌಲ್ಯದ ಎರಡು ದುಬಾರಿ ಮೊಬೈಲ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

Shorts Shorts