ಬೀದರ್: ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬದ ಸಡಗರ ಮನೆಮಾಡಿದ್ದರೆ, ಇತ್ತ ಬೀದರ್‌ನ ಕುಟುಂಬವೊಂದರಲ್ಲಿ ಇದೀಗ ಆಕ್ರಂದನ ಮುಗಿಲುಮುಟ್ಟಿದೆ. ಹಬ್ಬ ಆಚರಿಸಲು ಹಾಸ್ಟೆಲ್‌ನಲ್ಲಿದ್ದ ಮಗಳನ್ನು ಮನೆಗೆ ಕರೆತರಲು ಹೋದ ತಂದೆಯೊಬ್ಬರು, ಗಾಳಿಪಟದ ದಾರ (ಮಾಂಜಾ) ಕತ್ತು ಸೀಳಿದ ಪರಿಣಾಮ ನಡು ರಸ್ತೆಯಲ್ಲೇ ನರಳಿ ಪ್ರಾಣಬಿಟ್ಟ ಘೋರ ಘಟನೆ ಜಿಲ್ಲೆಯ ಚಿಟಗುಪ್ಪ ತಾಲೂಕಿನಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಬಂಬುಳಗಿ ಗ್ರಾಮದ ನಿವಾಸಿ ಸಂಜೀವ್ ಕುಮಾರ್ ಎಂದು ಗುರುತಿಸಲಾಗಿದೆ. ಸಂಜೀವ್ ಅವರ ಮಗಳು ಹುಮನಾಬಾದ್‌ನ ಹಾಸ್ಟೆಲ್ ಒಂದರಲ್ಲಿದ್ದು, ಸಂಕ್ರಾಂತಿ ಹಬ್ಬದ ರಜೆಗೆ ಆಕೆಯನ್ನು ಮನೆಗೆ ಕರೆದುಕೊಂಡು ಬರಲು ಸಂಜೀವ್ ಹಬ್ಬದ ಖುಷಿಯಲ್ಲಿ ಬೈಕ್ ಏರಿ ಹೊರಟಿದ್ದರು. ಆದರೆ ವಿಧಿ ಲಿಖಿತವೇ ಬೇರೆಯಾಗಿತ್ತು. ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಬಳಿ ಸಂಚರಿಸುತ್ತಿದ್ದಾಗ, ಎಲ್ಲಿಂದಲೋ ತೂರಿ ಬಂದ ಗಾಳಿಪಟದ ಹರಿತವಾದ ಮಾಂಜಾ ದಾರ ಏಕಾಏಕಿ ಸಂಜೀವ್ ಅವರ ಕತ್ತಿಗೆ ಸುತ್ತಿಕೊಂಡಿದೆ.
ದಾರದ ರಭಸ ಮತ್ತು ಹರಿತಕ್ಕೆ ಸಂಜೀವ್ ಅವರ ಕತ್ತು ಸೀ*ಳಿದ್ದು, ತೀವ್ರ ರ*ಕ್ತಸ್ರಾವ ಉಂಟಾಗಿದೆ. ಪರಿಣಾಮ, ಅವರು ನಡು ರಸ್ತೆಯಲ್ಲೇ ನರಳಿ ನರಳಿ ಪ್ರಾ*ಣಬಿಟ್ಟಿದ್ದಾರೆ. ಹಬ್ಬದ ವೇಳೆ ಮಗಳ ಜೊತೆ ನಗುನಗುತ್ತಾ ಮನೆಗೆ ಬರಬೇಕಿದ್ದ ಮನೆಯ ಯಜಮಾನ, ಹೀಗೆ ರಕ್ತದ ಮಡುವಿನಲ್ಲಿ ಶ*ವವಾಗಿರುವುದು ಗ್ರಾಮಸ್ಥರ ಕಣ್ಣೀರಿಗೆ ಕಾರಣವಾಗಿದೆ.






