ಕೊಪ್ಪಳ: ರಿಯಾಲಿಟಿ ಶೋ ಬಿಗ್ ಬಾಸ್ (Bigg-Boss) ಕ್ರೇಜ್ ಈಗ ದೇವಸ್ಥಾನದ ಅಂಗಳಕ್ಕೂ ತಲುಪಿದೆ. ಬಹುಮುಖ ಪ್ರತಿಭೆ, ‘ಗಿಲ್ಲಿ’ ಖ್ಯಾತಿಯ ನಟರಾಜ್ (Gilli Nataraj)ಅವರು ಈ ಬಾರಿಯ ಬಿಗ್ ಬಾಸ್ ಕಿರೀಟ ಮುಡಿಗೇರಿಸಿಕೊಳ್ಳಲಿ ಎಂದು ಹಾರೈಸಿ, ಅವರ ಅಭಿಮಾನಿಗಳು ಕೊಪ್ಪಳದ ಹುಲಿಗೆಮ್ಮ ದೇವಸ್ಥಾನದಲ್ಲಿ ವಿಶೇಷ ಹರಕೆ ಹೊತ್ತಿದ್ದಾರೆ.
ಗಿಲ್ಲಿ ನಟರಾಜ್ ಅಭಿಮಾನಿಗಳ ಬಳಗದ ವತಿಯಿಂದ ಹುಲಿಗೆಮ್ಮ ದೇವಿಗೆ ಭಕ್ತಿಯಿಂದ ಪಂಚಾಮೃತ ಅಭಿಷೇಕ ಮಾಡಿಸಿ, ದೇವಿಯ ಆಶೀರ್ವಾದ ಕೋರಲಾಯಿತು.
ಬಡವರ ಮಕ್ಕಳು ಬೆಳೆಯಬೇಕು, ಭಗವಂತ ಯಾವಾಗಲೂ ಕಷ್ಟದಲ್ಲಿರುವವರ ಪರವಾಗಿರಬೇಕು ಎಂಬ ಉದ್ದೇಶದೊಂದಿಗೆ ಅಭಿಮಾನಿಗಳು ಈ ಪೂಜೆ ಸಲ್ಲಿಸಿದ್ದಾರೆ. ನಟರಾಜ್ ಅವರ ಸಹಜ ವ್ಯಕ್ತಿತ್ವಕ್ಕೆ ಮನಸೋತಿರುವ ಅಭಿಮಾನಿಗಳು ಅವರು ವಿಜೇತರಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಗಿಲ್ಲಿ ನಟರಾಜ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಬಿಗ್ ಬಾಸ್ ಫಿನಾಲೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಈ ರೀತಿಯ ಹರಕೆಗಳು ಹೆಚ್ಚುತ್ತಿವೆ.






