ಬೆಂಗಳೂರು: ಕನ್ನಡದ ಖ್ಯಾತ ಪತ್ರಕರ್ತ, ದಿ. ರವಿ ಬೆಳಗೆರೆ ಅವರ ಬರಹಗಳನ್ನು ನಕಲು ಮಾಡಿ ಆನ್‌ಲೈನ್ ವೇದಿಕೆಗಳಲ್ಲಿ ಮಾರಾಟ ಮಾಡುತ್ತಿರುವ ಜಾಲದ ವಿರುದ್ಧ ಅವರ ಪುತ್ರಿ ಭಾವನಾ ಬೆಳಗೆರೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಗುಣಮಟ್ಟವಿಲ್ಲದ ನಕಲಿ ಪುಸ್ತಕಗಳನ್ನು ಮಾರಾಟ ಮಾಡುವ ಮೂಲಕ ಓದುಗರಿಗೆ ಹಾಗೂ ಲೇಖಕರ ಹಕ್ಕಿಗೆ ಧಕ್ಕೆ ತರುತ್ತಿರುವ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಮೀಶೋ ಕಂಪನಿಗಳ ವಿರುದ್ಧ ತಲಾ 1 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ಎಚ್ಚರಿಸಿದ್ದಾರೆ.
ವಿವಾದದ ಹಿನ್ನೆಲೆ ಏನು?
ರವಿ ಬೆಳಗೆರೆ ಅವರ ಅತ್ಯಂತ ಜನಪ್ರಿಯ ಪ್ರೇಮ ಕಾದಂಬರಿ ‘ಹೇಳಿ ಹೋಗು ಕಾರಣ’ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಕಿಡಿಗೇಡಿಗಳು, ಪುಸ್ತಕದ ನಕಲಿ ಪ್ರತಿಗಳನ್ನು ಸಿದ್ಧಪಡಿಸಿ ಕಡಿಮೆ ಬೆಲೆಗೆ ಇ-ಕಾಮರ್ಸ್ ವೇದಿಕೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಸ್ವತಃ ಪುಸ್ತಕಗಳನ್ನು ಆರ್ಡರ್ ಮಾಡಿ ಪರಿಶೀಲಿಸಿರುವ ಭಾವನಾ ಬೆಳಗೆರೆ, ಪೈರಸಿ ದಂಧೆಯ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.
ಭಾವನಾ ಬೆಳಗೆರೆ ಅವರ ಗಂಭೀರ ಆರೋಪಗಳು:
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು ಆನ್‌ಲೈನ್ ಕಂಪನಿಗಳ ವಿರುದ್ಧ ಕಿಡಿಕಾರಿದ್ದಾರೆ. “ನನ್ನ ತಂದೆ ಬದುಕಿದ್ದಾಗ ಪುಸ್ತಕದ ಗುಣಮಟ್ಟ ಮತ್ತು ಅಕ್ಷರ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಆದರೆ ಆನ್‌ಲೈನ್‌ನಲ್ಲಿ ಸಿಗುತ್ತಿರುವ ಪುಸ್ತಕಗಳಿಗೂ ನಮ್ಮ ಮೂಲ ಮುದ್ರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ” ಎಂದಿದ್ದಾರೆ.
ನಕಲಿ ಪುಸ್ತಕಗಳಲ್ಲಿ ಹಲವು ಪುಟಗಳೇ ನಾಪತ್ತೆಯಾಗಿದ್ದು, ಓದುಗರು ಹಣ ನೀಡಿ ಮೋಸ ಹೋಗುತ್ತಿದ್ದಾರೆ. “ಈ ಅಕ್ರಮ ಮಾರಾಟದಿಂದ ನನ್ನ ತಂದೆಯ ಹೆಸರಿಗೆ ಮತ್ತು ನಮ್ಮ ಸಂಸ್ಥೆಗೆ ಕಳಂಕ ಬರುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಈಗಾಗಲೇ ವಕೀಲರೊಂದಿಗೆ ಚರ್ಚಿಸಿದ್ದು, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಮೀಶೋ ವಿರುದ್ಧ ತಲಾ ₹1 ಕೋಟಿ ಮೊತ್ತದ ಕೇಸ್ ದಾಖಲಿಸುತ್ತಿದ್ದೇನೆ” ಎಂದಿದ್ದಾರೆ.
“ಇದು ನಮ್ಮ ಕಡೆಯಿಂದ ಮುದ್ರಣವಾಗುತ್ತಿರುವ ಪುಸ್ತಕಗಳಲ್ಲ. ಕೊಳಕು ಮನಸ್ಥಿತಿಯವರು ಮಾಡುತ್ತಿರುವ ಪೈರಸಿ ಕೆಲಸವಿದು. ಓದುಗರು ಇಂತಹ ನಕಲಿ ಪ್ರತಿಗಳನ್ನು ಖರೀದಿಸಿ ಮೋಸ ಹೋಗಬೇಡಿ” ಎಂದು ಭಾವನಾ ಮನವಿ ಮಾಡಿದ್ದಾರೆ.






