ಅಬುದಾಬಿ: ಕರಾವಳಿ ಮೂಲದ ವ್ಯಕ್ತಿಯೊಬ್ಬರಿಗೆ ವಿದೇಶಿ ನೆಲದಲ್ಲಿ ಅದೃಷ್ಟ ಲಕ್ಷ್ಮಿ ಒಲಿದಿದ್ದಾಳೆ. ಉಡುಪಿ (Udupi) ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಮಟ್ಟು ಮೂಲದ ಶಾಂತನು ಶೆಟ್ಟಿಗಾರ್ ಅಬುದಾಬಿಯ ಬಿಗ್ ಟಿಕೆಟ್ ಲಕ್ಕಿ ಡ್ರಾದಲ್ಲಿ (Big Ticket Lucky Draw) ಬರೋಬ್ಬರಿ 20 ಮಿಲಿಯನ್ ದಿರ್‌ಹಂ ಬಹುಮಾನ ಗೆದ್ದಿದ್ದಾರೆ. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 49 ಕೋಟಿ ರೂಪಾಯಿಗಳಾಗುತ್ತದೆ.
ಓಮನ್‌ನ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಶಾಂತನು, ಈ ಟಿಕೆಟನ್ನು ಏಕಾಂಗಿಯಾಗಿ ಖರೀದಿಸಿರಲಿಲ್ಲ. ತಮ್ಮ ಸ್ನೇಹಿತನೊಂದಿಗೆ ಹಣ ಹಂಚಿಕೊಂಡು ಜಂಟಿಯಾಗಿ ಟಿಕೆಟ್ ಖರೀದಿಸಿದ್ದರು. ಬಿಗ್ ಟಿಕೆಟ್‌ನ ನೇರ ಪ್ರಸಾರದಲ್ಲಿ ಶಾಂತನು ಅವರ ಹೆಸರನ್ನು ಘೋಷಿಸಿದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಸ್ನೇಹಿತನೊಂದಿಗೆ ಬಹುಮಾನ ಹಂಚಿಕೆ:
ಶಾಂತನು ಅವರು ಈ ಭಾರಿ ಮೊತ್ತದ ಬಹುಮಾನವನ್ನು ತಮ್ಮ ಸ್ನೇಹಿತನೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದ್ದಾರೆ. ತಮ್ಮ ಈ ಅಭೂತಪೂರ್ವ ಗೆಲುವಿನ ಸುದ್ಧಿಯನ್ನು ಕುಟುಂಬದವರೊಂದಿಗೆ ಹಂಚಿಕೊಂಡಿರುವ ಅವರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಹತ್ತಾರು ವರ್ಷಗಳಿಂದ ಬಿಗ್ ಟಿಕೆಟ್‌ನಲ್ಲಿ ಅದೃಷ್ಟ ಪರೀಕ್ಷಿಸುತ್ತಿರುವ ಅನಿವಾಸಿ ಭಾರತೀಯರಿಗೆ ಇವರ ಗೆಲುವು ಹೊಸ ಭರವಸೆ ನೀಡಿದೆ.






