ಪಾಲಕ್ಕಾಡ್: ಮೇಲ್ನೋಟಕ್ಕೆ ಅದು ಕಲ್ಲಂಗಡಿ ಹಣ್ಣು ಸಾಗಿಸುತ್ತಿದ್ದ ಸಾಮಾನ್ಯ ವಾಹನ. ಆದರೆ ಅದರ ಒಳಗೆ ಪರಿಶೀಲಿಸಿದ ಪೊಲೀಸರಿಗೆ ಸಿಕ್ಕಿದ್ದು ಬರೋಬ್ಬರಿ 18,000 ಜಿಲೆಟಿನ್ ಕಡ್ಡಿಗಳು! ಕಲ್ಲಂಗಡಿ ಹಣ್ಣಿನ ರಾಶಿಯ ಮರೆಯಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಜಾಲವೊಂದನ್ನು ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಭೇದಿಸಲಾಗಿದೆ.
ಖಚಿತವಾದ ಇಂಟೆಲಿಜೆನ್ಸ್ ಮಾಹಿತಿ ಮೇರೆಗೆ ಪಾಲಕ್ಕಾಡ್ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ತಮಿಳುನಾಡಿನಿಂದ ಕೇರಳದ ತ್ರಿಶೂರ್ ಜಿಲ್ಲೆಯತ್ತ ತೆರಳುತ್ತಿದ್ದ ಮಿನಿ ಲಾರಿಯನ್ನು ತಡೆಯಲು ಪೊಲೀಸರು ಯತ್ನಿಸಿದ್ದಾರೆ. ಆದರೆ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣವೇ ಎಚ್ಚೆತ್ತ ಪೊಲೀಸರು ಸಿನಿಮೀಯ ರೀತಿಯಲ್ಲಿ ವಾಹನವನ್ನು ಬೆನ್ನತ್ತಿ ಹಿಡಿದಿದ್ದಾರೆ.
ವಾಹನವನ್ನು ತಪಾಸಣೆ ಮಾಡಿದಾಗ ಕಲ್ಲಂಗಡಿ ಹಣ್ಣು ತುಂಬಿದ್ದ ಚೀಲಗಳ ಅಡಿಯಲ್ಲಿ ಬಚ್ಚಿಟ್ಟಿದ್ದ 90 ಬಾಕ್ಸ್‌ಗಳು ಪತ್ತೆಯಾಗಿವೆ. ಇದರಲ್ಲಿ ಬರೋಬ್ಬರಿ 18,000 ಜಿಲೆಟಿನ್ ಕಡ್ಡಿಗಳು ಹಾಗೂ 4,800 ಡಿಟೋನೇಟರ್‌ಗಳು ಪತ್ತೆಯಾಗಿವೆ. ಸಾಮಾನ್ಯವಾಗಿ ಇವುಗಳನ್ನು ಕಲ್ಲು ಗಣಿಗಾರಿಕೆಗೆ (Quarry) ಬಳಸಲಾಗುತ್ತದೆ ಎಂದು ಆರೋಪಿಗಳು ಹೇಳಿದ್ದರೂ, ಇಷ್ಟೊಂದು ಭಾರೀ ಪ್ರಮಾಣದ ಸ್ಫೋಟಕಗಳನ್ನು ಕದ್ದುಮುಚ್ಚಿ, ಹಣ್ಣಿನ ಹೆಸರಿನಲ್ಲಿ ಸಾಗಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ.
ಈ ಸ್ಫೋಟಕಗಳ ಸಾಗಾಟದ ಹಿಂದೆ ಭಯೋತ್ಪಾದನಾ ಕೃತ್ಯಗಳ ಸಂಚು ಇರಬಹುದೇ ಎಂಬ ಅನುಮಾನ ವ್ಯಕ್ತವಾಗಿದ್ದು, ಪ್ರಕರಣದ ತನಿಖೆಯನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ (ATS) ವಹಿಸಲಾಗಿದೆ. ತಮಿಳುನಾಡಿನಿಂದ ಈ ಸ್ಫೋಟಕಗಳನ್ನು ಎಲ್ಲಿಗೆ ಮತ್ತು ಯಾರಿಗೆ ತಲುಪಿಸಲು ಒಯ್ಯಲಾಗುತ್ತಿತ್ತು ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.






