S Shorts

​ಸಾಲಗಾರರಿಗೆ ಸದ್ಯಕ್ಕೆ ‘ರಿಲ್ಯಾಕ್ಸ್’: RBI ರೆಪೊ ದರದಲ್ಲಿ ಬದಲಾವಣೆ ಇಲ್ಲ; 5.25% ನಲ್ಲೇ ಮುಂದುವರಿದ ಬಡ್ಡಿ ದರ!

Posted By: Sagaradventure
Updated: Feb 6, 2026 | 3:12 PM

ಮುಂಬೈ: ದೇಶದ ಜನತೆ ಕುತೂಹಲದಿಂದ ಕಾಯುತ್ತಿದ್ದ ಪ್ರಸಕ್ತ ಸಾಲಿನ ಅಂತಿಮ ದ್ವೈಮಾಸಿಕ ಹಣಕಾಸು ನೀತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಂದು (ಶುಕ್ರವಾರ) ಪ್ರಕಟಿಸಿದೆ. ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳ ಹಿನ್ನೆಲೆಯಲ್ಲಿ ಆರ್‌ಬಿಐ ಈ ಬಾರಿ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ‘ಯಥಾಸ್ಥಿತಿ’ ಕಾಯ್ದುಕೊಳ್ಳಲು ನಿರ್ಧರಿಸಿದೆ. ಈ ಮೂಲಕ ರೆಪೊ ದರವನ್ನು 5.25 ಪರ್ಸೆಂಟ್‌ನಲ್ಲಿಯೇ ಮುಂದುವರಿಸಲಾಗಿದ್ದು, ಸಾಲಗಾರರ ಇಎಂಐ (EMI) ಹೊರೆಯಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಯಾಗುವುದಿಲ್ಲ.

​ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ರ ಸಾಲಿನ ಬಜೆಟ್ ಮಂಡಿಸಿದ ನಂತರ ನಡೆದ ಮೊದಲ ಆರ್‌ಬಿಐ ನೀತಿ ಪರಾಮರ್ಶೆ ಸಭೆ ಇದಾಗಿದೆ. ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಹಣಕಾಸು ನೀತಿ ಸಮಿತಿಯ (MPC) ನಿರ್ಧಾರಗಳನ್ನು ಪ್ರಕಟಿಸಿದರು. ಸಮಿತಿಯು ತಟಸ್ಥ ನಿಲುವಿನೊಂದಿಗೆ ಅಲ್ಪಾವಧಿಯ ಸಾಲದ ದರ ಅಥವಾ ರೆಪೊ ದರವನ್ನು ಶೇಕಡಾ 5.25 ರಷ್ಟು ಉಳಿಸಿಕೊಳ್ಳಲು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಅವರು ತಿಳಿಸಿದರು.

​ಕಳೆದ ವರ್ಷದ ಫೆಬ್ರವರಿಯಿಂದ ಈವರೆಗೆ ಆರ್‌ಬಿಐ ಒಟ್ಟು 125 ಬೇಸಿಸ್ ಪಾಯಿಂಟ್‌ಗಳಷ್ಟು ಬಡ್ಡಿ ದರವನ್ನು ಇಳಿಕೆ ಮಾಡಿದೆ. ಡಿಸೆಂಬರ್‌ನಲ್ಲಿ ನಡೆದ ಹಿಂದಿನ ಸಭೆಯಲ್ಲಿ 25 ಬೇಸಿಸ್ ಪಾಯಿಂಟ್‌ಗಳ ಕಡಿತ ಮಾಡಿ, ದರವನ್ನು 5.25 ಪರ್ಸೆಂಟ್‌ಗೆ ಇಳಿಸಲಾಗಿತ್ತು. ಅದಕ್ಕೂ ಮುನ್ನ ಫೆಬ್ರವರಿಯಿಂದ ಏಪ್ರಿಲ್ ನಡುವೆ ತಲಾ 25 ಬೇಸಿಸ್ ಪಾಯಿಂಟ್ ಮತ್ತು ಜೂನ್‌ನಲ್ಲಿ 50 ಬೇಸಿಸ್ ಪಾಯಿಂಟ್ ಕಡಿತ ಮಾಡಲಾಗಿತ್ತು. ಆದರೆ ಆಗಸ್ಟ್‌ನಲ್ಲಿ ದರ ಕಡಿತಕ್ಕೆ ಬ್ರೇಕ್ ಹಾಕಲಾಗಿತ್ತು.

​ದೇಶದ ಆರ್ಥಿಕತೆಯು ಚೇತರಿಕೆಯ ಹಾದಿಯಲ್ಲಿದ್ದು, ಭಾರತದ ಜಿಡಿಪಿ (GDP) ಬೆಳವಣಿಗೆ ದರವು ನಿರೀಕ್ಷೆಗಿಂತ ಉತ್ತಮವಾಗಿ ಶೇಕಡಾ 8.2ಕ್ಕೆ ತಲುಪಿದೆ. ಇನ್ನು ಕಳೆದ ಅಕ್ಟೋಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 0.25ರ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಸರ್ಕಾರವು ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 4 ರ ಆಸುಪಾಸಿನಲ್ಲಿ (ಶೇ. 2 ರಷ್ಟು ವ್ಯತ್ಯಾಸದೊಂದಿಗೆ) ನಿಯಂತ್ರಿಸುವ ಜವಾಬ್ದಾರಿಯನ್ನು ಆರ್‌ಬಿಐಗೆ ನೀಡಿದ್ದು, ಕೇಂದ್ರ ಬ್ಯಾಂಕ್ ಈ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ.