ಸಕ್ಕರೆ ನಾಡಿನಲ್ಲಿ ‘ಡಿಕೆಶಿ CM’ ಕೂಗು: ಭತ್ತದ ಗದ್ದೆಯಲ್ಲೇ ಅರಳಿದ ಅಭಿಮಾನ; ಫೋಟೋ ವೈರಲ್!
ಮಂಡ್ಯ: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆಯ ಚರ್ಚೆಗಳು ನಡೆಯುತ್ತಿರುವಾಗಲೇ, ಸಕ್ಕರೆ ನಾಡು ಮಂಡ್ಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಪರವಾಗಿ ವಿಶಿಷ್ಟ ಅಭಿಯಾನವೊಂದು ನಡೆದಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ಮುಖ್ಯಮಂತ್ರಿಯಾಗಿ ನೋಡಲು ಭತ್ತದ ಗದ್ದೆಯನ್ನೇ ಕ್ಯಾನ್ವಾಸ್ ಮಾಡಿಕೊಂಡಿದ್ದು, ಹಸಿರು ಪೈರಿನ ನಡುವೆ ‘ಡಿಕೆಶಿ ಸಿಎಂ ಆಗಲಿ’ ಎಂದು ಬರೆದು ಗಮನ ಸೆಳೆದಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಮೊತ್ತಹಳ್ಳಿ ಗ್ರಾಮದ ರೈತ ಸಿದ್ದೇಗೌಡರ ಜಮೀನಿನಲ್ಲಿ ಈ ಅಭಿಮಾನ ಅನಾವರಣಗೊಂಡಿದೆ. ಗ್ರಾಮದ ಸಚಿನ್ ಎಂಬುವವರ ಆಶಯದಂತೆ, ಕಲಾವಿದ ರಾಜು ಅವರು ಭತ್ತ ನಾಟಿ ಮಾಡುವಾಗಲೇ (15 ದಿನಗಳ ಹಿಂದೆ) ಈ ವಿಶೇಷ ವಿನ್ಯಾಸ ರೂಪಿಸಿದ್ದರು. ಇದೀಗ ಪೈರು ಬೆಳೆದು ನಿಂತಿದ್ದು, ಹಸಿರು ಗದ್ದೆಯ ಮಧ್ಯೆ “ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲಿ” ಹಾಗೂ ಸ್ಥಳೀಯ ಶಾಸಕ “ರಮೇಶ್ ಬಂಡಿಸಿದ್ದೇಗೌಡ ಮಂತ್ರಿ ಆಗಲಿ” ಎಂಬ ಅಕ್ಷರಗಳು ಸ್ಪಷ್ಟವಾಗಿ ಮತ್ತು ಸುಂದರವಾಗಿ ಕಾಣುತ್ತಿವೆ.
ಅಭಿಮಾನಿಗಳು ಕೇವಲ ಕಲೆ ಪ್ರದರ್ಶಿಸಿಲ್ಲ, ಬದಲಿಗೆ ರಾಜಕೀಯ ಬೇಡಿಕೆಯನ್ನೂ ಇಟ್ಟಿದ್ದಾರೆ. “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟು, ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಬೇಕು,” ಎಂದು ಅವರು ಮನವಿ ಮಾಡಿದ್ದಾರೆ. ದೇವರ ಆಶೀರ್ವಾದದಿಂದ ಡಿಕೆಶಿ ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಈ ವಿಶಿಷ್ಟ ಗದ್ದೆಯನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು ಮುಗಿಬೀಳುತ್ತಿದ್ದಾರೆ.






