S Shorts

‘ದೊಡ್ಡ ಸಂಬಳದ Uber ಕೆಲಸಕ್ಕೆ ಗುಡ್ ಬೈ’: Coding ಮೇಷ್ಟ್ರಾದ ಟೆಕ್ಕಿಯ ಕಥೆ ವೈರಲ್!

Posted By: Sagaradventure
Updated: Feb 10, 2026 | 8:06 AM

ನವದೆಹಲಿ: ಲಕ್ಷಾಂತರ ರೂಪಾಯಿ ಸಂಬಳ, ಪ್ರತಿಷ್ಠಿತ ‘ಉಬರ್’ (Uber) ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆ, ಮತ್ತು ಸುಭದ್ರ ಭವಿಷ್ಯ… ಇವೆಲ್ಲವನ್ನೂ ಯಾರಾದರೂ ಒದ್ದು ಬರುತ್ತಾರೆಯೇ? ಆದರೆ, ಇಲ್ಲೊಬ್ಬ ಟೆಕ್ಕಿ ತಮ್ಮ ಕನಸಿನ ಬೆನ್ನೇರಿ ಈ ಐಷಾರಾಮಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಐದು ವರ್ಷಗಳ ಹಿಂದೆ ಅವರು ತೆಗೆದುಕೊಂಡ ಆ ಒಂದು ‘ರಿಸ್ಕ್’, ಇಂದು ಅವರನ್ನು ಲಕ್ಷಾಂತರ ವಿದ್ಯಾರ್ಥಿಗಳ ನೆಚ್ಚಿನ ‘ಕೋಡಿಂಗ್ ಗುರು’ವನ್ನಾಗಿ ಮಾಡಿದೆ.

ಅಕ್ಷಯ್ ಸೈನಿ (Akshay Saini) ಎಂಬುವವರೇ ಈ ಸಾಹಸಿ ಟೆಕ್ಕಿ. ಇತ್ತೀಚೆಗೆ ‘ಎಕ್ಸ್’ (X) ಖಾತೆಯಲ್ಲಿ ತಮ್ಮ ಪಯಣದ ಬಗ್ಗೆ ಬರೆದುಕೊಂಡಿರುವ ಅವರು, “ಐದು ವರ್ಷಗಳ ಹಿಂದೆ ನಾನು ಉಬರ್ ಕೆಲಸ ಬಿಟ್ಟಾಗ, ಜನ ಅಕ್ಷರಶಃ ನನ್ನನ್ನು ಹುಚ್ಚ ಅಂದಿದ್ದರು. ಇಷ್ಟು ಒಳ್ಳೆಯ ಕೆಲಸ, ದೊಡ್ಡ ಬ್ರಾಂಡ್ ಬಿಟ್ಟು ಯೂಟ್ಯೂಬ್‌ನಲ್ಲಿ ಪಾಠ ಮಾಡ್ತೀಯಾ ಎಂದು ಕೇಳಿದ್ದರು” ಎಂದು ನೆನಪಿಸಿಕೊಂಡಿದ್ದಾರೆ.

ಕೆಲಸ ಬಿಡುವ ನಿರ್ಧಾರ ಮಾಡಿದಾಗ ಬಂದ ವಿಚಿತ್ರ ಸಲಹೆಗಳನ್ನು ಅಕ್ಷಯ್ ಹಂಚಿಕೊಂಡಿದ್ದಾರೆ. “ಕೆಲವರು ವೀಕೆಂಡ್‌ನಲ್ಲಿ ಪಾಠ ಮಾಡು, ಕೆಲಸ ಮಾತ್ರ ಬಿಡಬೇಡ ಎಂದರು. ಇನ್ನೂ ಕೆಲವರು, ‘ಸಾಫ್ಟ್‌ವೇರ್ ಇಂಜಿನಿಯರ್ ಟ್ಯಾಗ್ ಇಟ್ಕೊಂಡು ಮೊದಲು ಮದುವೆ ಆಗು, ಮೇಷ್ಟ್ರಾದರೆ ಒಳ್ಳೆ ಹುಡುಗಿ ಸಿಗಲ್ಲ’ ಎಂದು ಸಲಹೆ ನೀಡಿದ್ದರು. ಆದರೆ ಮದುವೆ ನನ್ನ ಆದ್ಯತೆಯಾಗಿರಲಿಲ್ಲ, ನನಗೆ ಗೌರವ ತರುವ ವೃತ್ತಿ ಬೇಕಿತ್ತು,” ಎಂದು ಅವರು ಹೇಳಿಕೊಂಡಿದ್ದಾರೆ.

ಕೆಲಸ ಬಿಟ್ಟ ನಂತರ 10 ತಿಂಗಳು ವಿರಾಮ ಪಡೆದ ಅಕ್ಷಯ್, ‘ನಮಸ್ತೆ ದೇವ್’ (NamasteDev) ಎಂಬ ಕೋಡಿಂಗ್ ಕಲಿಸುವ ಪ್ಲಾಟ್‌ಫಾರ್ಮ್ ಸ್ಥಾಪಿಸಿದರು. ಇಂದು ಅವರ ಯೂಟ್ಯೂಬ್ ಚಾನೆಲ್‌ಗೆ 20 ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದಾರೆ (Subscribers). ಪ್ರಸ್ತುತ ತಮ್ಮ ಹುಟ್ಟೂರಾದ ಡೆಹ್ರಾಡೂನ್‌ನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿರುವ ಅವರು, ರಿಮೋಟ್ ವರ್ಕ್ ಮಾಡುತ್ತಾ ತಾವು ಬಯಸಿದ ನೆಮ್ಮದಿಯ ಜೀವನವನ್ನು (Slow Life) ನಡೆಸುತ್ತಿದ್ದಾರೆ.

“ಕೆಲವೊಮ್ಮೆ ಸರಿಯಾದ ನಿರ್ಧಾರಗಳು ಆರಂಭದಲ್ಲಿ ಮೂರ್ಖತನದಂತೆ ಕಾಣುತ್ತವೆ, ಆದರೆ ಕಾಲಕ್ರಮೇಣ ಅದರ ಮೌಲ್ಯ ತಿಳಿಯುತ್ತದೆ” ಎಂದು ಅಕ್ಷಯ್ ಯುವಜನತೆಗೆ ಕಿವಿಮಾತು ಹೇಳಿದ್ದಾರೆ.