ರಾಂಚಿ: ಜಾರ್ಖಂಡ್‌ನ ಹಜಾರಿಬಾಗ್ (Hazaribagh) ಜಿಲ್ಲೆಯಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಭಾರಿ ದುರಂತವೊಂದು ಸಂಭವಿಸಿದೆ. ಕಾಡಾನೆಗಳ ಹಿಂಡು ನಡೆಸಿದ ಭೀಕರ ದಾಳಿಗೆ ಒಂದೇ ಕುಟುಂಬದ ನಾಲ್ವರು ಸದಸ್ಯರು ಸೇರಿದಂತೆ ಒಟ್ಟು ಆರು ಜನರು ದಾರುಣವಾಗಿ ಸಾ*ವನ್ನಪ್ಪಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ಹಜಾರಿಬಾಗ್ ಪೂರ್ವ ವಿಭಾಗೀಯ ಅರಣ್ಯ ಅಧಿಕಾರಿ (DFO) ವಿಕಾಸ್ ಕುಮಾರ್ ಉಜ್ವಲ್ ಅವರು ಪಿಟಿಐಗೆ (PTI) ಮಾಹಿತಿ ನೀಡಿದ್ದು, ಕಳೆದ ಕೆಲವು ದಿನಗಳಿಂದ ಅರಣ್ಯ ಪ್ರದೇಶದಲ್ಲಿ ಅಲೆದಾಡುತ್ತಿದ್ದ ಕಾಡಾನೆಗಳ ಹಿಂಡು, ಗುರುವಾರ ರಾತ್ರಿ ಚುರ್ಚು ಬ್ಲಾಕ್‌ನ ಗೊಂಡ್ವಾರ ಗ್ರಾಮಕ್ಕೆ ಪ್ರವೇಶಿಸಿತ್ತು. ಶುಕ್ರವಾರ ಬೆಳಿಗ್ಗೆ ಈ ಹಿಂಡು ಗ್ರಾಮಸ್ಥರ ಮೇಲೆ ದಾಳಿ ನಡೆಸಿ, ಆರು ಜನರನ್ನು ತುಳಿದು ಕೊಂದಿದೆ.
“ಮೃ*ತಪಟ್ಟವರಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಸೇರಿದ್ದಾರೆ ಎಂಬುದು ಅತ್ಯಂತ ಶೋಚನೀಯ ಸಂಗತಿ. ದಾಳಿಯಲ್ಲಿ ಒಂದು ಮಗು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹಜಾರಿಬಾಗ್‌ನ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಡಿಎಫ್‌ಒ ಉಜ್ವಲ್ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಬೊಕಾರೊ, ರಾಮಗಢ ಮತ್ತು ಹಜಾರಿಬಾಗ್ ಜಿಲ್ಲೆಗಳಲ್ಲಿ ಈ ಆನೆಗಳ ಹಿಂಡು ಸಂಚರಿಸುತ್ತಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಇದಕ್ಕೂ ಮೊದಲು ಬೊಕಾರೊ ಜಿಲ್ಲೆಯಲ್ಲಿಯೂ ಇದೇ ಹಿಂಡು ಅನೇಕರ ಸಾ*ವು-ನೋವುಗಳಿಗೆ ಕಾರಣವಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದು, ಆನೆಗಳನ್ನು ಕಾಡಿಗೆ ಅಟ್ಟಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.






