ಕ್ಯಾಲಿಫೋರ್ನಿಯಾ: ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಕ್ಕೆ ತೆರಳಿದ್ದ ಕರ್ನಾಟಕದ ( Karnataka ) 22 ವರ್ಷದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (Saketh Srinivasaiah) ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದಾರೆ. ಪ್ರತಿಷ್ಠಿತ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ (California University) ಅಧ್ಯಯನ ಮಾಡುತ್ತಿದ್ದ ಸಾಕೇತ್, ಫೆಬ್ರವರಿ 9 ರಿಂದ ಪೋಷಕರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಘಟನೆಯ ವಿವರ:
ಐಐಟಿ ಮದ್ರಾಸ್‌ನ ಪದವೀಧರರಾಗಿರುವ ಸಾಕೇತ್ ಶ್ರೀನಿವಾಸಯ್ಯ, ಫೆಬ್ರವರಿ 9 ರಂದು ಕ್ಯಾಲಿಫೋರ್ನಿಯಾದ ಬರ್ಕಲಿ ಹಿಲ್ಸ್‌ನಲ್ಲಿರುವ ಲೇಕ್ ಅನಜ್ (Lake Anza) ಬಳಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅದಾದ ನಂತರ ಅವರ ಯಾವುದೇ ಸುಳಿವು ಲಭ್ಯವಾಗಿಲ್ಲ.
ವಿದ್ಯಾರ್ಥಿಯ ನಾಪತ್ತೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿ ಕಾರ್ಯಪ್ರವೃತ್ತವಾಗಿದೆ. ಸಾಕೇತ್ ಪೋಷಕರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಕಾನ್ಸುಲೇಟ್ ಅಧಿಕಾರಿಗಳು, ಸ್ಥಳೀಯ ಪೊಲೀಸ್ ಇಲಾಖೆ ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಸೇರಿ ಹುಡುಕಾಟವನ್ನು ಚುರುಕುಗೊಳಿಸಿದ್ದಾರೆ.
ಪೋಷಕರಲ್ಲಿ ಆತಂಕ:
ಕರ್ನಾಟಕ ಮೂಲದ ಸಾಕೇತ್ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಐಐಟಿಯಂತಹ ಸಂಸ್ಥೆಯಲ್ಲಿ ಓದಿ ವಿದೇಶಕ್ಕೆ ತೆರಳಿದ್ದರು. ಮಗನ ನಾಪತ್ತೆಯಿಂದ ಪೋಷಕರು ಕಂಗಾಲಾಗಿದ್ದು, ಶೀಘ್ರವೇ ಮಗ ಪತ್ತೆಯಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಕ್ಯಾಲಿಫೋರ್ನಿಯಾ ಪೊಲೀಸರು ಲೇಕ್ ಅನಜ್ ಸುತ್ತಮುತ್ತ ತನಿಖೆ ನಡೆಸುತ್ತಿದ್ದಾರೆ.






