S Shorts

Shocking News | ವಿಷದ ರುಚಿ ನೋಡಲು ಹೋಗಿ ಪ್ರಾ*ಣ ಕಳೆದುಕೊಂಡರಾ 4 ಬಾಲಕಿಯರು?: ಬಿಹಾರದಲ್ಲಿ ನಡೆಯಿತು ಘೋರ ದುರಂತ!

Posted By: Sagaradventure
Updated: Feb 15, 2026 | 5:39 PM

ಔರಂಗಾಬಾದ್ (ಬಿಹಾರ): ಕುತೂಹಲಕ್ಕೆ ವಿಷದ ರುಚಿ ನೋಡಲು ಹೋದ ನಾಲ್ವರು ಅಪ್ರಾಪ್ತ ಬಾಲಕಿಯರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಜನವರಿ 29 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. 12 ರಿಂದ 15 ವರ್ಷ ವಯಸ್ಸಿನ ನಾಲ್ವರು ಬಾಲಕಿಯರು ಸ್ಥಳದಲ್ಲೇ ಮೃತಪಟ್ಟರೆ, ಸಮಯಪ್ರಜ್ಞೆ ಮೆರೆದು ವಿಷವನ್ನು ಉಗುಳಿದ ಐದನೇ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಸಾ*ವಿನ ‘ರುಚಿ’ ನೋಡಿದ್ರಾ? 

ಬದುಕುಳಿದ ಬಾಲಕಿ ಪೊಲೀಸರಿಗೆ ನೀಡಿರುವ ಹೇಳಿಕೆ ಎದೆ ನಡುಗಿಸುವಂತಿದೆ. ಐವರು ಸ್ನೇಹಿತೆಯರು ಹೊಲದಲ್ಲಿ ಆಟವಾಡುತ್ತಿದ್ದಾಗ, ಒಬ್ಬಾಕೆ ವಿಷದ ಬಾಟಲಿ ತೋರಿಸಿ “ಇದರ ರುಚಿ ಹೇಗಿದೆ ನೋಡೋಣ” ಎಂದಿದ್ದಾಳೆ. ಅದಕ್ಕೆ ಮತ್ತೊಬ್ಬಾಕೆ “ಇದನ್ನು ತಿಂದರೆ ಸಾ*ಯುತ್ತೇವೆ” ಎಂದು ಎಚ್ಚರಿಸಿದ್ದಾಳೆ. ಆದರೂ ಲೆಕ್ಕಿಸದ ಅವರು, “ಇದರಿಂದ ಸಾ*ಯುತ್ತೀವಾ ಪರೀಕ್ಷಿಸೋಣ” ಎಂದು ಹೇಳಿ ನಾಲ್ವರು ವಿಷ ಸೇವಿಸಿದ್ದಾರೆ. ಇದನ್ನು ಕಂಡ ಐದನೇ ಬಾಲಕಿ ಭಯಗೊಂಡು ಬಾಯಲ್ಲಿದ್ದ ವಿಷವನ್ನು ತಕ್ಷಣ ಉಗುಳಿ ಮನೆಗೆ ಓಡಿ ಬಂದು ಪೋಷಕರಿಗೆ ತಿಳಿಸಿದ್ದಾಳೆ. ಮನೆಯವರು ಬೇವಿನ ರಸ ಕುಡಿಸಿ ಆಕೆಯ ಪ್ರಾಣ ಉಳಿಸಿದ್ದಾರೆ. ಆದರೆ ಉಳಿದ ನಾಲ್ವರು ಬಾಲಕಿಯರು ಪೋಷಕರು ಸ್ಥಳಕ್ಕೆ ತಲುಪುವ ಮುನ್ನವೇ ಕೊನೆಯುಸಿರೆಳೆದಿದ್ದರು.

ರಹಸ್ಯವಾಗಿ ಅಂತ್ಯಸಂಸ್ಕಾರ 

ಘಟನೆ ನಡೆದ ನಂತರ ಮೃ*ತ ಬಾಲಕಿಯರ ಪೋಷಕರು ಪೊಲೀಸರಿಗೆ ಮಾಹಿತಿ ನೀಡದೆ, ವಿಷಯವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ. ನಾಲ್ವರ ಮೃ*ತದೇಹಗಳನ್ನು ಒಂದೇ ಚಿತೆಯ ಮೇಲೆ ಇಟ್ಟು ದಹನ ಮಾಡಲಾಗಿದೆ. ಆದರೆ ಗ್ರಾಮದಲ್ಲಿ ಈ ಬಗ್ಗೆ ವದಂತಿ ಹಬ್ಬಿದಾಗ ಎಚ್ಚೆತ್ತ ಪೊಲೀಸರು ತನಿಖೆ ಆರಂಭಿಸಿದಾಗ ಸತ್ಯ ಬಯಲಿಗೆ ಬಂದಿದೆ. ಮೃ*ತರೆಲ್ಲರೂ ಕಡುಬಡ ವಲಸೆ ಕಾರ್ಮಿಕರ ಮಕ್ಕಳಾಗಿದ್ದಾರೆ.

ಆತ್ಮಹ*ತ್ಯೆಯ ಶಂಕೆ 

ಪೊಲೀಸರ ತನಿಖೆಯಲ್ಲಿ ಈ ಪ್ರಕರಣಕ್ಕೆ ತಿರುವು ಸಿಕ್ಕಿದೆ. ದೌದ್‌ನಗರ ಎಸ್‌ಡಿಪಿಒ ಅಶೋಕ್ ಕುಮಾರ್ ದಾಸ್ ಅವರ ಪ್ರಕಾರ, ಇದೊಂದು ಸಾಮೂಹಿಕ ಆತ್ಮಹ*ತ್ಯೆಯಾಗಿರುವ ಸಾಧ್ಯತೆ ಇದೆ. ಘಟನೆಯ ಹಿಂದಿನ ದಿನ ಬಾಲಕಿಯರು ಕೆಲ ಹುಡುಗರೊಂದಿಗೆ ಮಾತನಾಡುತ್ತಿದ್ದರು. ಇದನ್ನು ಕಂಡ ಪೋಷಕರು ಬೈದಿದ್ದರು ಎನ್ನಲಾಗಿದೆ. ಈ ಅವಮಾನ ತಾಳಲಾರದೆ ಅವರು ಆತ್ಮಹ*ತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಪೋಷಕರು ಇದನ್ನು ನಿರಾಕರಿಸಿದ್ದು, ಇದು ಕುತೂಹಲದಿಂದ ಆದ ಆಕಸ್ಮಿಕ ಸಾ*ವು ಎಂದು ವಾದಿಸುತ್ತಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.