S Shorts

‘ಆಪರೇಷನ್’ಗಿಳಿದ ‘ಡಾಲಿ’: ಕೈಯಲ್ಲಿ ಗನ್, ಉದ್ದನೆಯ ಕೂದಲು.. Retro ಲುಕ್‌ನಲ್ಲಿ ಅಬ್ಬರಿಸಿದ ‘ಶಂಕರ್’!

Posted By: Sagaradventure
Updated: Feb 15, 2026 | 3:53 PM

ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಕಾಂಬಿನೇಷನ್ ಎಂದೇ ಕರೆಯಲಾಗುತ್ತಿರುವ ಹೇಮಂತ್ ಎಂ. ರಾವ್ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ನಟರಾಕ್ಷಸ ಡಾಲಿ ಧನಂಜಯ ಅಭಿನಯದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಚಿತ್ರತಂಡ ಸಿನಿಪ್ರಿಯರಿಗೆ ಮತ್ತೊಂದು ಸರ್ಪ್ರೈಸ್ ನೀಡಿದ್ದು, ಡಾಲಿ ಧನಂಜಯ ಅವರ ಖಡಕ್ ಕ್ಯಾರೆಕ್ಟರ್ ಲುಕ್ ಅನ್ನು ರಿವೀಲ್ ಮಾಡಿದೆ.

‘ಶಂಕರ್’ ಅವತಾರದಲ್ಲಿ ಡಾಲಿ ದರ್ಬಾರ್ ಈಗಾಗಲೇ ತಮ್ಮ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ಧನಂಜಯ, ಈ ಚಿತ್ರದಲ್ಲಿ ‘ಶಂಕರ್’ ಎಂಬ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಉದ್ದ ಕೂದಲು ಬಿಟ್ಟುಕೊಂಡು, ಕೈಯಲ್ಲಿ ಗನ್ ಹಿಡಿದು ಫೈಯರಿಂಗ್ ಮಾಡುತ್ತಿರುವ ಡಾಲಿ ಅವರ ರಗಡ್ ಅವತಾರ ಅಭಿಮಾನಿಗಳಿಗೆ ಕಿಕ್ ನೀಡಿದೆ. 1970ರ ದಶಕದ ರೆಟ್ರೋ ಶೈಲಿಯಲ್ಲಿ ಕಾಣಿಸಿಕೊಂಡಿರುವ ಅವರ ಮಾಸ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ರೆಟ್ರೋ ಕಾಲದ ಸ್ಪೈ ಥ್ರಿಲ್ಲರ್ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಒಂದು ಪಿರಿಯಡ್ ಆಕ್ಷನ್-ಸ್ಪೈ ಥ್ರಿಲ್ಲರ್ ಚಿತ್ರವಾಗಿದ್ದು, ಕಥೆಯು 70ರ ದಶಕದ ಹಿನ್ನೆಲೆಯಲ್ಲಿ ಸಾಗುತ್ತದೆ. ಆ ಕಾಲಘಟ್ಟವನ್ನು ತೆರೆಯ ಮೇಲೆ ಮರುಸೃಷ್ಟಿಸಲು ಚಿತ್ರತಂಡ ಸಾಕಷ್ಟು ಶ್ರಮವಹಿಸಿದೆ. ವಿಶೇಷವೆಂದರೆ, 70ರ ದಶಕದ ದೃಶ್ಯ ವೈಭವವನ್ನು ಕಟ್ಟಿಕೊಡಲು ವಿಂಟೇಜ್ LOMO ಲೆನ್ಸ್‌ಗಳನ್ನು ಬಳಸಿ ಚಿತ್ರೀಕರಣ ನಡೆಸಲಾಗುತ್ತಿದೆ. ಇದು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.

ಶಿವಣ್ಣ ‘ಏಜೆಂಟ್ ಪ್ರಕಾಶ್’ ಈಗಾಗಲೇ ಚಿತ್ರದ ನಾಯಕ ಶಿವರಾಜ್‌ಕುಮಾರ್ ಅವರ ಲುಕ್ ಕೂಡ ಬಿಡುಗಡೆಯಾಗಿದ್ದು, ಅವರು ‘ಏಜೆಂಟ್ ಪ್ರಕಾಶ್’ ಪಾತ್ರದಲ್ಲಿ ಮಿಂಚಲಿದ್ದಾರೆ. ನಾಯಕಿ ಪ್ರಿಯಾಂಕಾ ಮೋಹನ್ ಅವರ ಫಸ್ಟ್ ಲುಕ್ ಕೂಡ ಗಮನ ಸೆಳೆದಿದೆ. ಇನ್ನುಳಿದಂತೆ WWE ಸ್ಟಾರ್ ಸುಖ್ವಿಂದರ್ ಸಿಂಗ್ ಗ್ರೆವಾಲ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಿನಿಮಾದ ತೂಕ ಹೆಚ್ಚಿಸಿದೆ.

ವೈಶಾಕ್ ಜೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ ನಿರ್ದೇಶನವಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ.